

ಹೈದರಾಬಾದ್: ಈ ಸಲದ ಸಂಕ್ರಾಂತಿಗೆ ಟಾಲಿವುಡ್‌ನಲ್ಲಿ ಹಬ್ಬದ ಕಳೆ ಜೋರಾಗಿದೆ. ಸ್ಟಾರ್ ನಟರ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಿವೆ. ಆ ಪೈಕಿ ಬಹು ನಿರೀಕ್ಷೆ ಮೂಡಿಸಿದ್ದು ಮಹೇಶ್ ಬಾಬು ಅವರ ಗುಂಟೂರು ಖಾರಂ ಸಿನಿಮಾ. ಅದೇ ರೀತಿ ನವ ನಟ ತೇಜ ಸಜ್ಜಾ ಅವರ ಹನುಮಾನ್ ಚಿತ್ರ. ಮತ್ತೊಂದು ಕಡೆ ವಿಜಯ್ ಸೇತುಪತಿ, ಕತ್ರಿನಾ ಕೈಫ್ ಜೋಡಿಯ ಮೇರಿ ಕ್ರಿಸ್‌ಮಸ್ ಸಿನಿಮಾ ಸಹ ಬಿಡುಗಡೆ ಆಗಿತ್ತು. ಇದೀಗ ಈ ಸಿನಿಮಾಗಳ ಮೊದಲ ದಿನದ ಕಲೆಕ್ಷನ್ ಎಷ್ಟು? ಇಲ್ಲಿದೆ ರಿಪೋರ್ಟ್.
ಗುಂಟೂರು ಖಾರಂಗೆ ನೆಗೆಟಿವ್ ಕಾಮೆಂಟ್: ಮಹೇಶ್ ಬಾಬು ನಾಯಕನಾಗಿ ನಟಿಸಿರುವ ಗುಂಟೂರು ಖಾರಂ ಸಿನಿಮಾಕ್ಕೆ ನೆಗೆಟಿವ್ ಟಾಕ್ ಮುಳುವಾಗಿದೆ. ಮೊದಲ ಶೋದಿಂದಲೇ ಸಿನಿಮಾದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿದೆ. 14 ವರ್ಷಗಳ ಬಳಿಕ ತ್ರಿವಿಕ್ರಮ್- ಮಹೇಶ್ ಕಾಂಬಿನೇಷನ್‌ನಲ್ಲಿ ಚಿತ್ರ ಬರುತ್ತಿರುವುದಕ್ಕೆ ಕುತೂಹಲ ಹೆಚ್ಚಾಗಿತ್ತು. ಚಿತ್ರ ಬ್ಲಾಕ್ ಬಸ್ಟರ್ ಆಗಲಿದೆ ಎಂದೇ ಭಾವಿಸಿದ್ದರು. ಆದರೆ, ಆ ನಂಬಿಕೆ ಇದೀಗ ತಲೆ ಕೆಳಗಾಗಿದೆ. ಹೈದರಾಬಾದ್, ವಾರಂಗಲ್, ವಿಜಯವಾಡ, ವಿಶಾಖಪಟ್ಟಣದಲ್ಲಿ ಟಿಕೆಟ್‌ಗಳು ಸೋಲ್ಡ್ ಆಗದ ಕಾರಣ, ಹನುಮಾನ್ ಸಿನಿಮಾ ಕಡೆಗೆ ಪ್ರೇಕ್ಷಕರು ವಾಲುತ್ತಿದ್ದಾರೆ.
ಹನುಮಾನ್ ಸಿನಿಮಾ ಕಡೆ ಮನಸ್ಸು: ಆಂಧ್ರ ಮತ್ತು ತೆಲಂಗಾಣದಲ್ಲಿ ಈಗಾಗಲೇ ಗುಂಟೂರು ಖಾರಂ ಸಿನಿಮಾ ಟಿಕೆಟ್ ಬುಕ್ ಮಾಡಿದ್ದವರು, ಆ ಟಿಕೆಟ್ ಕ್ಯಾನ್ಸಲ್ ಮಾಡಿ ಹನುಮಾನ್ ಸಿನಿಮಾ ಕಣ್ತುಂಬಿಕೊಳ್ಳುತ್ತಿದ್ದಾರೆ. ಬುಕ್ ಮೈ ಶೋನಲ್ಲಿ 'ಹನುಮಾನ್' ಚಿತ್ರ ಪ್ರತಿ ಗಂಟೆಗೆ 20 ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಿಕೊಂಡರೆ, ‘ಗುಂಟೂರು ಖಾರಂ’ ಸಿನಿಮಾಕ್ಕೆ 16 ಸಾವಿರ ಟಿಕೆಟ್ ಮಾರಾಟವಾಗುತ್ತಿದೆ. ಇದು ಮಲ್ಟಿಫ್ಲೆಕ್ಸ್ ಕಥೆಯಾದರೆ, ಸಿಂಗಲ್ ಸ್ಕ್ರೀನ್‌ಗಳಲ್ಲಿ ಮಹೇಶ್ ಬಾಬು ಸಿನಿಮಾ ಪಕ್ಕಕ್ಕಿಟ್ಟು ಹನುಮಾನ್‌ಗೆ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.
ಹಾಗಾದರೆ ಈ ಎರಡೂ ಸಿನಿಮಾ ಗಳಿಸಿದ್ದೆಷ್ಟು?
ಮಹೇಶ್ ಬಾಬು ಸಿನಿಮಾ ಎಂದ ತಕ್ಷಣ ಅಲ್ಲಿ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಇದೆ. ಮುಂಗಡ ಟಿಕೆಟ್ ಬುಕಿಂಗ್‌ನಲ್ಲೂ ಈ ಸಿನಿಮಾ ದಾಖಲೆ ಬರೆದಿತ್ತು. ಇತ್ತ ಹನುಮಾನ್ ಸಿನಿಮಾ ನಿರೀಕ್ಷೆ ಮೂಡಿಸಿತ್ತಾದರೂ, ಹೇಳಿಕೊಳ್ಳುವಷ್ಟು ದೊಡ್ಡ ಮಟ್ಟದಲ್ಲಿ ಟಿಕೆಟ್ ಬುಕಿಂಗ್ ಆಗಿರಲಿಲ್ಲ. ಆದರೆ, ಅದ್ಯಾವಾಗ ಗುಂಟೂರು ಖಾರಂ ಸಿನಿಮಾಕ್ಕೆ ನೆಗೆಟಿವ್ ಕಾಮೆಂಟ್‌ಗಳು ಕೇಳಿಬಂದವೋ, ಅಲ್ಲಿಂದ ಹನುಮಾನ್‌ಗೆ ಬಲ ಬಂದಿದೆ.
ಕಲೆಕ್ಷನ್ ವಿಚಾರದಲ್ಲಿ ಮೊದಲ ದಿನ ಗುಂಟೂರು ಖಾರಂ 50 ಕೋಟಿ ಗಳಿಸಿದರೆ, ಹನುಮಾನ್ 12 ಕೋಟಿ ಗಳಿಸಿದೆ. ನೆಗೆಟಿವ್ ಟಾಕ್ ಹಿನ್ನೆಲೆಯಲ್ಲಿ ಮುಂಗಡ ಟಿಕೆಟ್ ಬುಕಿಂಗ್ ಸೇರಿ, ಶೋಗಳೇ ಕ್ಯಾನ್ಸಲ್ ಆಗುತ್ತಿರುವ ಬಗ್ಗೆ ವರದಿ ಬಂದಿದೆ. ಇದೆಲ್ಲವನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಹನುಮಾನ್ ಓಟ ಕೊಂಚ ಬಿರುಸಾಗಿಯೇ ಇದೆ ಎಂದೇ ಬಾಕ್ಸ್ ಆಫೀಸ್ ಪಂಡಿತರು ಊಹಿಸಿದ್ದಾರೆ. ಗುಂಟೂರು ಖಾರಂ ಚಿತ್ರ ಕುಸಿತ ಕಾಣಿಸಲಿದೆ ಎಂದೂ ಹೇಳಿದ್ದಾರೆ.