ಹನುಮಾನ್​ ಚಾಲೀಸಾ ಪ್ರಕರಣ; ಸಂತ್ರಸ್ತನನ್ನೇ ವಶಕ್ಕೆ ಪಡೆದ ಪೊಲೀಸರು

Hanuman Chalisa Row
Published on

ಬೆಂಗಳೂರು: ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್​ ಪೊಲೀಸ್​ ಠಾಣೆ ಸಿಬ್ಬಂದಿ ಸಂತ್ರಸ್ತನನ್ನು ವಶಕ್ಕೆ ಪಡೆದಿದ್ದಾರೆ.

ನಗರ್ತಪೇಟೆಯಲ್ಲಿರುವ ಮೊಬೈಲ್​ ಅಂಗಡಿ ಮಾಲೀಕ ಮುಖೇಶ್​ ಮೇಲೆ ಮುಸ್ಲಿಂ ಯುವಕರು ಹಲ್ಲೆ ಮಾಡಿರುವುದನ್ನು ಖಂಡಿಸಿ ಸಂಸದರಾದ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಹಾಗೂ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ಭಾನುವಾರ ಸಂಜೆ ತಮ್ಮ ಅಂಗಡಿಯಲ್ಲಿ ಹನುಮಾನ್​ ಚಾಲೀಸಾ ಹಾಕಿದ್ದಕ್ಕೆ ಐದರಿಂದ ಆರು ಮಂದಿ ಯುವಕರು ಮಾಲೀಕ ಮುಖೇಶ್​ ಮೇಲೆ ಹಲ್ಲೆ ನಡೆಸಿದ್ದರು. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು. ಘಟನೆ ಸಂಬಂಧ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದರು. ಆದರೆ ಬಂಧನಕ್ಕೆ ಒಳಗಾದವರು ಹಲ್ಲೆ ಮಾಡಿದ ವ್ಯಕ್ತಿಗಳಲ್ಲ. ಹಲ್ಲೆ ಮಾಡಿದವರನ್ನು ರಕ್ಷಿಸಲು ಬೇರೆ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

Suresh Kumar

ಇದಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಂತ್ರಸ್ತ ಮುಖೇಶ್​ ಪ್ರತಿಭಟನಾ ರ‍್ಯಾಲಿಗೆ ಮುಂದಾಗುತ್ತಿದ್ದಂತೆ ಪೊಲೀಸರು ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಹೇಳಿ ಅವರನ್ನು ತಡೆದು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಬಿಜೆಪಿ ಶಾಸಕ ಸುರೇಶ್​ ಕುಮಾರ್​ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಪೊಲೀಸರು ಅವರನ್ನು ಎಳೆದಾಡಿರುವ ಘಟನೆ ನಡೆದಿದೆ.

ಈ ಕುರಿತು ಮಾತನಾಡಿದ ಶಾಸಕ ಸುರೇಶ್​ ಕುಮಾರ್​, ನಾವು ಬೆಂಗಳೂರಿನಲ್ಲಿ ಇಲ್ಲ. ಹಿಂದೆ ಕಾಶ್ಮೀರದಲ್ಲಿ ಆದಂತೆ ಇಲ್ಲಿ ಆಗುತ್ತಿದೆ. ನಮ್ಮ ಮೇಲೆ ಇಲ್ಲಿ ದೌರ್ಜನ್ಯ ನಡೆಯುತ್ತಿದೆ. ಕೂಡಲೇ ಬಂಧಿತರನ್ನು ಬಿಡುಗಡೆ ಮಾಡಬೇಕು ಎಂದು ಶಾಸಕ ಸುರೇಶ್​ ಕುಮಾರ್​ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net