

ಬಾಗಲಕೋಟೆ: ವಿದ್ಯಾರ್ಥಿನಿ ಓರ್ವಳ ಮೇಲೆ ಶಿಕ್ಷಕಿಯರು ಕಳ್ಳತನ ಆರೋಪ ಹೊರಿಸಿದ ಕಾರಣ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಕದಾಂಪುರ ಗ್ರಾಮದದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿ ಕದಾಂಪುರ ಗ್ರಾಮದ ಫ್ರೌಢಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಮಾರ್ಚ್ 16ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಾರ್ಚ್ 14ರಂದು ಕದಾಂಪುರ ಫ್ರೌಢಶಾಲೆಯ ಇಬ್ಬರು ಶಿಕ್ಷಕಿಯರು ತಮ್ಮ ಬಳಿ ಇದ್ದ ಎರಡು ಸಾವಿರ ರೂಪಾಯಿ ಹಣ ಕಾಣೆಯಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಬಳಿ ವಿಚಾರಿಸಿದ್ದರು. ಮಾರ್ಚ್ 15ರಂದು ಸಂಶಯದ ಮೇರೆಗೆ ಹತ್ತನೇ ತರಗತಿಯ ನಾಲ್ಕು ಹಾಗೂ ಎಂಟನೇ ತರಗತಿಯ ಓರ್ವ ವಿದ್ಯಾರ್ಥಿನಿಯ ಸಮವಸ್ತ್ರ ಬಿಚ್ಚಿಸಿ ಪರಿಶೀಲನೆ ನಡೆಸಿದ್ದಾರೆ.
ಇದರಿಂದ ಮನನೊಂದ ಎಂಟನೇ ತರಗತಿ ವಿದ್ಯಾರ್ಥಿನಿ ಅವಮಾನ ತಾಳಲಾರದೆ ಶನಿವಾರ (ಮಾರ್ಚ್ 16) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಬಾಗಲಕೋಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.