

ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಗಳಲ್ಲಿ ಒಂದಾದ ಐಪಿಎಲ್ 17ನೇ ಆವೃತ್ತಿಯ ಪ್ರಾರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ನಡುವೆ ನೀತಾ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ತಂಡ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಈ ಹಿಂದೆ ನಾಯಕತ್ವದ ವಿಚಾರ ಹಾಗೂ ಆಟಗಾರರ ನಡುವಿನ ವೈಮನಸ್ಸಿನ ಕಾರಣಕ್ಕೆ ಸದ್ದು ಮಾಡಿದ ಫ್ರಾಂಚೈಸಿ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗುತ್ತಿದೆ.
2023ರ ವರ್ಷಾಂತ್ಯದಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆ ವೇಳೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದ ಶ್ರೀಲಂಕಾದ ಎಡಗೈ ವೇಗಿ ದಿಲ್ಶನ್ ಮಧುಶಂಕ ಗಾಯಕ್ಕೆ ತುತ್ತಾಗಿದ್ದು, ಅವರಿಗೆ ವೈದ್ಯರು ಕೆಲ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಹೀಗಾಗಿ ಸಂಪೂರ್ಣ ಗುಣಮುಖರಾದರೆ ಮಾತ್ರ ಐಪಿಎಲ್ನಲ್ಲಿ ಆಡಲಿದ್ದಾರೆ.
ಬಾಂಗ್ಲಾದೇಶ್ ವಿರುದ್ಧದ ಏಕದಿನ ಸರಣಿ ವೇಳೆ ಶ್ರೀಲಂಕಾದ ಎಡಗೈ ವೇಗಿ ದಿಲ್ಶನ್ ಮಧುಶಂಕ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದು, ಅವರು ಸರಣಿಯನ್ನು ಮುಗಿಸಿಕೊಂಡು ಮುಂಬೈ ತಂಡ ಕೂಡಿಕೊಳ್ಳುವ ಬದಲು ತವರಿಗೆ ವಾಪಸ್ ಆಗಿದ್ದಾರೆ. ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದು ಸಂಪೂರ್ಣ ಗುಣಮುಖರಾದರೆ ಮಾತ್ರ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಹೊಸ ಸೀಸನ್ ಆರಂಭಿಸುವ ಇರಾದೆಯಲ್ಲಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಟಗಾರರ ಗಾಯದ ಚಿಂತೆಯೇ ಹೊಸ ತಲೆನೋವಾಗಿ ಪರಿಣಮಿಸಿದೆ. ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಹೇಗೆ ಪ್ರದರ್ಶನ ನೀಡಲಿದೆ ಕಾದು ನೋಡಬೇಕಿದೆ.