

ಮುಂಬೈ: ನಟಿ ಹನ್ಸಿಕಾ ಮೋಟ್ವಾನಿ, ಉದ್ಯಮಿ ಸೋಹೈಲ್ ಕಠೂರಿಯಾ ಎಂಬಾತನನ್ನು ಮದುವೆಯಾಗುತ್ತಿರುವುದು, ಸೋಹೈಲ್ ಇತ್ತೀಚೆಗಷ್ಟೇ ಹನ್ಸಿಕಾಗೆ ಪ್ಯಾರಿಸ್ನ ಐಫೆಲ್ ಟವರ್ ಎದುರು ಪ್ರಪೋಸ್ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ, ಹನ್ಸಿಕಾ, ಭಾವಿ ಪತಿಯ ಮೊದಲ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ವಿಡಿಯೋ ನೋಡಿ ಇದೀಗ ಅಭಿಮಾನಿಗಳು ದಂಗಾಗಿದ್ದಾರೆ.
ಹೌದು, ಹನ್ಸಿಕಾ ಈಗ ಮದುವೆಯಾಗಲು ಮುಂದಾಗಿರುವ ಸೊಹೈಲ್ ಬೇರೆ ಯಾರೂ ಅಲ್ಲ, ಹನ್ಸಿಕಾಳ ಗೆಳತಿ ರಿಂಕಿ ಬಜಾಜ್ ಅವರ ಮಾಜಿ ಪತಿ. ಸೊಹೈಲ್ಗೆ ಇದು ಎರಡನೆಯ ಮದುವೆ. ಅದು ಕೂಡ ಮಾಜಿ ಪತ್ನಿಯ ಗೆಳತಿ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿಯ ಜೊತೆ!
ಮೂಲಗಳ ಪ್ರಕಾರ, ಹನ್ಸಿಕಾ ಅವರ ಬೆಸ್ಟ್ಫ್ರೆಂಡ್ ರಿಂಕಿ ಬಜಾಜ್ ಜೊತೆ ಸೋಹೈಲ್ 2016ರಲ್ಲಿ ಗೋವಾದಲ್ಲಿ ಮದುವೆ ಆಗಿದ್ದರು. ಅಷ್ಟೇ ಅಲ್ಲ, ಈ ಮದುವೆಯ ಸಂಗೀತ ಕಾರ್ಯಕ್ರಮದಲ್ಲಿ ಹನ್ಸಿಕಾ ಸಹ ನೃತ್ಯ ಮಾಡಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋಗಳೂ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವಿಡಿಯೋವನ್ನು ಈ ಕೆಳಗಿನ ಯೂಟ್ಯೂಬ್ ಲಿಂಕ್ನಲ್ಲಿ ನೀವು ಕಾಣಬಹುದು.
ಮಾಧ್ಯಮ ವರದಿಗಳ ಪ್ರಕಾರ ಹನ್ಸಿಕಾ ಮತ್ತು ಸೊಹೈಲ್ ಇಬ್ಬರು ಕೆಲ ಕಾಲದಿಂದ ಫ್ರೆಂಡ್ಸ್ ಆಗಿದ್ದರು ಎನ್ನಲಾಗಿದೆ. ಅಲ್ಲದೆ, ಇಬ್ಬರು ಬಿಜಿನೆಸ್ ಪಾಲುದಾರರೂ ಹೌದಂತೆ! ಅನೇಕ ಈವೆಂಟ್ಗಳಲ್ಲಿ ಇಬ್ಬರು ಜೊತೆಯಾಗಿಯೇ ಕೆಲಸ ಮಾಡಿದೆ. ಒಟ್ಟಿಗೆ ಕೆಲಸ ಮಾಡುತ್ತಾ ಇಬ್ಬರು ಪ್ರೀತಿಯ ಬಲೆಯಲ್ಲಿ ಬಿದ್ದರು ಎಂದು ಹೇಳಲಾಗಿದೆ.
ಇನ್ನು 2016ರಲ್ಲಿ ದೊಡ್ಡ ಮಟ್ಟದಲ್ಲಿ ಮದುವೆಯಾದ ರಿಂಕಿ ಮತ್ತು ಸೋಹೈಲ್ ನಡುವೆ ಕೆಲವು ಕಾಲದ ನಂತರ ಸಂಬಂಧ ಹಳಿಸಿದೆ. ಆ ನಂತರ ಇಬ್ಬರೂ ದೂರವಾದರಂತೆ. ಈ ಕಥೆಯಲ್ಲಿ ಹನ್ಸಿಕಾ ಯಾವಾಗ ಎಂಟ್ರಿ ಕೊಟ್ಟರೋ ಗೊತ್ತಿಲ್ಲ. ಒಟ್ಟಿನಲ್ಲಿ ರಿಂಕಿಯಿಂದ ದೂರವಾದ ಸೋಹೈಲ್, ಈಗ ಹನ್ಸಿಕಾ ಅವರನ್ನು ಎರಡನೆಯ ಮದುವೆಯಾಗುತ್ತಿದ್ದಾರೆ. ರಿಂಕಿ ಜತೆಗೆ ಸಂಬಂಧ ಯಾಕೆ ಹಳಿಸಿತು ಮತ್ತು ಹನ್ಸಿಕಾ ಜತೆಗೆ ಹೊಸ ಸಂಬಂಧ ಹೇಗೆ ಕುದುರಿತು ಎಂಬ ಕಥೆ ಇನ್ನಷ್ಟೇ ಗೊತ್ತಾಗಬೇಕಿದೆ. ಒಟ್ಟಿನಲ್ಲಿ ರಿಂಕಿಯಿಂದ ದೂರವಾದ ಸೋಹೈಲ್, ಈಗ ಹನ್ಸಿಕಾ ಜತೆಗೆ ಮದುವೆಯಾಗುವುದಕ್ಕೆ ತಯಾರಿ ನಡೆಸಿದ್ದಾರೆ.
ಅಂದಹಾಗೆ, ಹನ್ಸಿಕಾ ಮತ್ತು ಸೋಹೈಲ್ ಅವರ ನಿಶ್ಚಿತಾರ್ಥ ಆಗಿದ್ದೆಲ್ಲಿ ಗೊತ್ತಾ? ಪ್ಯಾರಿಸ್ನ ಐಫೆಲ್ ಟವರ್ನ ಮುಂಬಾಗದಲ್ಲಿ. ಕ್ಯಾಂಡಲ್ ಮತ್ತು ಗುಲಾಬಿಗಳನ್ನು ಹೃದಯದ ಆಕಾರದಲ್ಲಿ ಅಲಂಕರಿಸಿ, ಅದರ ನಡುವೆ ನಿಂತ ಹನ್ಸಿಕಾಗೆ ಸೋಹೈಲ್ ಪ್ರಪೋಸ್ ಮಾಡಿದ್ದಾರೆ. ಅವರ ಹಿಂದೆ ‘ಮ್ಯಾರಿ ಮೀ’ ಎಂಬ ಪದಗಳನ್ನು ನೋಡಬಹುದು. ಇದೇ ಸಂದರ್ಭದಲ್ಲಿ ಹನ್ಸಿಕಾ ಮತ್ತು ಸೋಹೈಲ್ ಪರಸ್ಪರ ಉಂಗುರಗಳನ್ನು ತೊಡಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ‘ಈಗ ಮತ್ತು ಮುಂದೆಯೂ’ ಎಂದು ಹನ್ಸಿಕಾ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಿಸಿರುವ ಸೋಹೈಲ್, ‘ಐ ಲವ್ ಯೂ’ ಎಂದು ಹೇಳಿದ್ದಾರೆ. ಅನೂಷ್ಕಾ ಶೆಟ್ಟಿ, ಖುಷ್ಬೂ, ಶ್ರೀಯಾ ರೆಡ್ಡಿ ಮುಂತಾದವರು ಈ ಜೋಡಿಗೆ ಶುಭ ಕೋರಿದ್ದಾರೆ.
ಹನ್ಸಿಕಾ ಮತ್ತು ಸೋಹೈಲ್ ಮದುವೆ ಡಿಸೆಂಬರ್ 4ರಂದು ಜೈಪುರದ ಮಂಡೋಟ ಫೋರ್ಟ್ನಲ್ಲಿ ನಡೆಯಲಿದೆ. ಡಿ. 2ರಂದು ಮೆಹಂದಿ ಕಾರ್ಯಕ್ರಮವಿದ್ದು, ಮರುದಿನ ಸಂಗೀತ್ ಆಯೋಜಿಸಲಾಗಿದೆ. ಡಿ. 4ರ ಮುಂಜಾನೆ ಹಳದಿ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಮದುವೆ ನಡೆಯಲಿದೆ. (ಏಜೆನ್ಸೀಸ್)