ಕೈಬರಹದ ಪಹಣಿಗೆ ರೂ. 200!

nadakacheri (1)
ಬೀರೂರು ನಾಡ ಕಚೇರಿ.
Published on

ಬೀರೂರು: ನಾಡಕಚೇರಿಗಳಲ್ಲಿ ಲಭ್ಯವಿರುವ ದೃಢೀಕೃತ ಕೈಬರಹದ ಹಳೆಯ ಪಹಣಿ ಪಡೆಯಲು ಸರ್ಕಾರ 20 ರೂ. ನಿಗದಿ ಪಡಿಸಿದ್ದರೆ ಇಲ್ಲಿನ ನಾಡಕಚೇರಿಯಲ್ಲಿ ರೈತರು 200 ರೂ. ಪಾವತಿಸಬೇಕಾಗಿದೆ.

ರೈತರ ಅನುಕೂಲಕ್ಕಾಗಿ ಒಂದೇ ಸೂರಿನಡಿ ದೊರೆಯುವ ರೈತರ ಹಳೆಯ ಪಹಣಿ ಸೇರಿ ಹಲವು ಸೌಲಭ್ಯಗಳಿಗೆ ಸರ್ಕಾರ ದರ ನಿಗದಿ ಮಾಡಿದೆ. ಸರ್ಕಾರ ಒಂದು ದೃಢೀಕೃತ ಹಳೆಯ ಪಹಣಿಗೆ 20 ರೂ. ನಿಗದಿ ಮಾಡಿದೆ. ಆದರೆ ಇಲ್ಲಿ 20 ರೂ. ಜತೆಗೆ ರೆಕಾರ್ಡ್ ರೂಂನಲ್ಲಿ ಅವುಗಳನ್ನು ಹುಡುಕಿಕೊಡಲು 200 ರಿಂದ 300 ರೂ. ಹೆಚ್ಚುವರಿಯಾಗಿ ಪಾವತಿಸಬೇಕು.
ಹಳೆಯ ದೃಢೀಕೃತ ಪಹಣಿ ರೈತರು ಬ್ಯಾಂಕ್‌ಗಳಲ್ಲಿ ಕೃಷಿ ಸಾಲ ಹಾಗೂ ಅಭಿವೃದ್ಧಿ ಸಾಲ ಪಡೆಯಲು ಅನಿವಾರ್ಯವಾಗಿದ್ದು, ಅದಕ್ಕೆ ಸರ್ಕಾರ ನಿಗದಿಪಡಿಸಿದ ಹಣವನ್ನು ಮಾತ್ರ ಗ್ರಾಹಕರಿಂದ ಪಡೆಯಬೇಕೆಂಬ ಸುತ್ತೋಲೆಗಳಿದ್ದರೂ ಬೀರೂರು ಹೋಬಳಿ ರೈತರಿಂದ ಹೆಚ್ಚಿನ ಹಣ ಪಡೆಯುತ್ತಿದ್ದಾರೆ. ನಾಡಕಚೇರಿ ಅಧಿಕಾರಿಗಳಿಂದಲೇ ಹಣ ಸುಲಿಗೆ ನಡೆದರೆ ಯಾರ ಬಳಿ ಮೊರೆ ಹೋಗಬೇಕೆಂಬುದು ರೈತರಿಗೆ ತಿಳಿಯದಾಗಿದೆ. ಇಷ್ಟೇ ಅಲ್ಲ ಕೊಟ್ಟ ಅರ್ಜಿಗಳನ್ನು ವಾರದ ನಂತರ ಹೋಗಿ ಕೇಳಿದರೆ ಕಳೆದುಹೋಗಿದೆ ಎಂದು ಸಬೂಬು ಹೇಳಿ ಕಳುಹಿಸುತ್ತಿದ್ದಾರೆ.
ನಾಡಕಚೇರಿಯ ರೆಕಾರ್ಡ್ ರೂಂನಲ್ಲಿ ಯಾವುದೇ ರಹಸ್ಯವೂ ಉಳಿದಿಲ್ಲ. ಯಾರಿಗೂ ನಿರ್ಬಂಧವಿಲ್ಲ. ಯಾರು ಬೇಕಾದರೂ ಒಳ ಹೋಗಿ ಬೇಕಾದ ದಾಖಲೆಗಳನ್ನು ಹುಡುಕಿ ತರಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಳೆಯ ದಾಖಲೆಗಳು ಕಣ್ಮರೆಯಾದರೆ ಅಂಥ ದಾಖಲೆಗಳನ್ನು ಕೇಳುವ ರೈತರಿಗೆ ಅವು ನಶಿಸಿಹೋಗಿವೆ ಎಂದು ಹಿಂಬರಹ ನೀಡುವುದನ್ನು ರೂಢಿಸಿಕೊಂಡಿದ್ದಾರೆ.
ಇನ್ನು ಗ್ರಾಮ ಲೆಕ್ಕಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಾರದೆ ರೈತರು ಕಚೇರಿ ಮುಂದೆ ಸಾಲುಗಟ್ಟಿ ನಿಂತು ವಾಪಸ್ ಹೋಗುವಂತಾಗಿದೆ. ೆನ್‌ನಲ್ಲಿ ಸಂಪರ್ಕಿಸಿದರೆ, ನಾನು ಜಮೀನಿಗೆ ಕಾರ್ಯ ನಿಮಿತ್ತ ಬಂದಿದ್ದೇವೆ ಎನ್ನುತ್ತಾರೆ. ಇವರಿಗೆ ನಿಗದಿತ ಸಮಯವೂ ಇಲ್ಲ, ಹಾಜರಿಯೂ ಇಲ್ಲ. ಕೇಳುವವರೂ ಇಲ್ಲದಂತಾಗಿದೆ. ಇಷ್ಟೊಂದು ಹದಗೆಟ್ಟ ಆಡಳಿತವನ್ನು ಸರಿಪಡಿಸುವ ಜವಾಬ್ದಾರಿ ತಹಸೀಲ್ದಾರ್ ಮೇಲಿದೆ.
10 ದಿನಗಳ ಹಿಂದೆ ಹಳೆಯ ದೃಢೀಕೃತ ಪಹಣಿ ಪಡೆಯಲು ಅರ್ಜಿ ನೀಡಲಾಗಿತ್ತು. ಈಗ ಕೇಳಿದರೆ ಅರ್ಜಿ ಕಳೆದಿದೆ. ಮತ್ತೊಮ್ಮೆ ಅರ್ಜಿ ನೀಡಿ ಎಂದು ಹೇಳುತ್ತಾರೆ. ಇದು ರೈತರನ್ನು ಕಂಡರೆ ಅಪಹಾಸ್ಯವೋ ಅಥವಾ ನಿರ್ಲಕ್ಷ್ಯವೋ ತಿಳಿಯದಾಗಿದೆ ಎನ್ನುತ್ತಾರೆ ಹೋರಿತಿಮ್ಮನಹಳ್ಳಿ ರೈತ ಗಂಗಾಧರಪ್ಪ.
ಸರ್ಕಾರ ನಿಗದಿಪಡಿಸಿರುವ ಶುಲ್ಕವನ್ನು ಮಾತ್ರ ಅಧಿಕಾರಿಗಳು ಪಡೆಯಬೇಕು, ಹೆಚ್ಚುವರಿಯಾಗಿ ಪಡೆಯುವಂತಿಲ್ಲ. ಹೆಚ್ಚುವರಿಯಾಗಿ ಹಣ ಪಡೆಯುತ್ತಿರುವ ದೂರುಗಳು ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಡೂರು ತಹಸೀಲ್ದಾರ್ ಕವಿರಾಜ್ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net