

ಚಿಕ್ಕಮಗಳೂರು: ಉಡುಪಿ ಕಾಲೇಜಿನಲ್ಲಿ ನಡೆಸಿರುವ ವಿಡಿಯೋ ಚಿತ್ರೀಕರಣ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ ಒತ್ತಾಯಿಸಿದರು.
ಇಡೀ ಸಮಾಜವೇ ತಲೆತಗ್ಗಿಸುವ ಕೃತ್ಯ ಉಡುಪಿ ಕಾಲೇಜಿನಲ್ಲಿ ನಡೆದಿದೆ. ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಿ ಇಂಥ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಶೌಚಗೃಹದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಮಾಡಿದ ವಿದ್ಯಾರ್ಥಿನಿಯರ ಕೃತ್ಯ ಅಕ್ಷಮ್ಯ ಅಪರಾಧ. ಇದರ ಹಿಂದೆ ಲವ್ ಜಿಹಾದ್ ಮತ್ತು ಭಯೋತ್ಪಾದಕ ಸಂಘಟನೆಗಳ ಕುಮ್ಮಕ್ಕು ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ರಾಜ್ಯ ಸರ್ಕಾರ ಯಾವುದೇ ಸಬೂಬು ಹೇಳದೆ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ತಮಾಷೆಗಾಗಿ ವಿಡಿಯೋ ಮಾಡಿದ್ದಾರೆ ಎಂದು ಹೇಳುವ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಕಾಲೇಜು ವಿದ್ಯಾರ್ಥಿನಿಯರು ಪ್ರಬುದ್ಧರಾಗಿದ್ದು ಬೇರೆಯವರ ಕುಮ್ಮಕ್ಕಿಲ್ಲದೆ ಇಂಥ ಕೃತ್ಯ ನಡೆಸಲು ಸಾಧ್ಯವೇ ಇಲ್ಲ. ಪ್ರಕರಣದ ಗಂಭೀರ ಅರಿತು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುಮೊಟೊ ಯಾಕೆ ದಾಖಲಿಸಲಿಲ್ಲ?: ರಾಷ್ಟ್ರೀಯ ಮಹಿಳಾ ಆಯೋಗದ ದಕ್ಷಿಣ ಭಾರತ ಸದಸ್ಯೆ ಖುಷ್ಬೂ ಸುಂದರ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಇದು ಅತಿ ಸೂಕ್ಷ್ಮ ವಿಚಾರ. ಸಂತ್ರಸ್ತರ ಹೆಸರುಗಳು ಹೊರಬಾರದಂತೆ ತನಿಖೆ ನಡೆಸಬೇಕು. ಘಟನೆ ನಡೆದ ಕೂಡಲೇ ಮೂವರನ್ನು ಕರೆದು ತನಿಖೆ ಮಾಡಬೇಕಾಗಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಕ್ರಮ ಕೈಗೊಳ್ಳಬೇಕಿತ್ತು. ರಾಷ್ಟ್ರೀಯ ಮಹಿಳಾ ಆಯೋಗದ ಗಮನಕ್ಕೆ ಬಂದ ಕೂಡಲೇ ಸುಮೊಟೊ ದೂರನ್ನು ಯಾಕೆ ದಾಖಲಿಸಲಿಲ್ಲ ಎಂದು ವೀಣಾ ಶೆಟ್ಟಿ ಪ್ರಶ್ನಿಸಿದರು.
ಜಿಹಾದಿ ಮನಸ್ಥಿತಿ: ವಿಡಿಯೋ ಮಾಡಿದಂಥ ಯಾವುದೇ ಘಟನೆಗಳು ಉಡುಪಿ ಜಿಲ್ಲೆಯಲ್ಲಿ ಮತ್ತು ಕಾಲೇಜಿನಲ್ಲಿ ನಡೆದಿಲ್ಲ ಎಂದು ಉಡುಪಿ ಎಸ್ಪಿ ಅಕ್ಷಯ್ ಮಚ್ಚೀಂದ್ರ ಹೇಳಿಕೆ ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಈ ಹಿಂದೆ ಹಿಜಾಬ್ ವಿಚಾರ ಉಡುಪಿಯಿಂದಲೇ ಪ್ರಾರಂಭವಾಗಿದ್ದು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮತೀಯ ಗಲಭೆಗಳು, ಅತ್ಯಾಚಾರಗಳು ಮತ್ತು ರಕ್ತಪಾತಗಳು ನಿರಂತರವಾಗಿ ನಡೆಯುತ್ತಿದೆ. ಜೈನ ಮುನಿಗಳ ಹತ್ಯೆ, ಟಿ.ನರಸಿಪುರದಲ್ಲಿ ವೇಣುಗೋಪಾಲ್ ಹತ್ಯೆ ಗಮನಿಸಿದಾಗ ಸರ್ಕಾರವೇ ಒಂದು ರೀತಿ ಜಿಹಾದಿ ಮನಸ್ಥಿತಿಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಸದಸ್ಯೆ ರೂಪಾ, ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಶಾಖಾ, ಉಪಾಧ್ಯಕ್ಷೆ ಸರೋಜಾ, ಪುಷ್ಪ್ಪಾ, ಚಂಪಾ, ಪಲ್ಲವಿ, ಆರ್ಥಿಕ ಪ್ರಕೋಷ್ಠ ಸಂಚಾಲಕಿ ಶ್ಯಾಮಲಾ ಇದ್ದರು.