

ಜೆರುಸಲೇಂ: ಹಮಾಸ್ ಮತ್ತು ಇಸ್ರೇಲ್ ನಡುವಿನ ಘೋಷಿತ ಕದನವಿರಾಮ ಕೊನೆಗೊಳ್ಳಲು ಇನ್ನೇನು ಕೆಲವೇ ಗಂಟೆಗಳು ಇರುವಾಗ ತಾತ್ಕಾಲಿಕ ಯುದ್ಧ ನಿಲುಗಡೆ ಇನ್ನಷ್ಟು ವಿಸ್ತರಿಸಲು ಅಂತಾರಾಷ್ಟ್ರೀಯ ಪ್ರಯತ್ನಗಳು ಬಿರುಸಿನಿಂದ ಸಾಗಿವೆ. ಹಮಾಸ್ ವಶದಲ್ಲಿರುವ ಎಲ್ಲ ಒತ್ತೆಯಾಳುಗಳು ಮತ್ತು ಇಸ್ರೇಲ್ ಜೈಲುಗಳಲ್ಲಿರುವ ಪ್ಯಾಲೆಸ್ತೀನಿ ಕೈದಿಗಳ ಬಿಡುಗಡೆಗೆ ಜಾಗತಿಕ ಮಧ್ಯಸ್ಥಿಕೆಗಾರರು ಎಡೆಬಿಡದೆ ಪ್ರಯತ್ನಿಸುತ್ತಿದ್ದಾರೆ. ಕತಾರ್ ಮತ್ತು ಈಜಿಪ್ಟ್ ಸಂಧಾನದ ಪರಿಣಾಮವಾಗಿ ಕದನವಿರಾಮ ಘೊಷಣೆಯಾಗಿತ್ತು. ಕದನವಿರಾಮ ವಿಸ್ತರಣೆಗೆ ಹಮಾಸ್ ಹೆಚ್ಚಿನ ಒಲವು ತೋರಿದೆ. ಸೋಮವಾರ ಮುಗಿಯಬೇಕಿದ್ದ ಕದನವಿರಾಮವನ್ನು ಪ್ರತಿ 10 ಒತ್ತೆಯಾಳುಗಳ ಬಿಡುಗಡೆಗೆ 1 ದಿನ ವಿಸ್ತರಿಸಲು ಇಸ್ರೇಲ್ ಒಪ್ಪಿದೆ. ಹಮಾಸ್ ಬುಧವಾರ ಒತ್ತೆಯಾಳುಗಳ ಇನ್ನೊಂದು ತಂಡವನ್ನು ಮುಕ್ತಗೊಳಿಸುವ ನಿರೀಕ್ಷೆ ಇದೆ. ಈ ನಡುವೆ, 10 ಇಸ್ರೇಲಿ ಹಾಗೂ ಇಬ್ಬರು ವಿದೇಶಿ ಒತ್ತೆಯಾಳುಗಳನ್ನು ಗಾಜಾದಿಂದ ಹಮಾಸ್ ಮಂಗಳ ವಾರ ಬಿಡುಗಡೆಗೊಳಿಸಿದ ನಂತರ, ಇಸ್ರೇಲಿ ಸೆರೆಮನೆಗಳಿಂದ 30 ಪ್ಯಾಲೆಸ್ತೀನಿ ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಲಾಗಿದೆ. ಕದನವಿರಾಮದಲ್ಲಿ ಬಿಡುಗಡೆ ಯಾದವರ ಸಂಖ್ಯೆ 81ಕ್ಕೇರಿದೆ.
ಬಾಂಬ್ಗಿಂತ ರೋಗಕ್ಕೆ ಹೆಚ್ಚು ಬಲಿ: ಗಾಜಾಪಟ್ಟಿಯಲ್ಲಿ ಬಾಂಬ್ ದಾಳಿಗಳಿಗಿಂತ ರೋಗಗಳಿಂದ ಹೆಚ್ಚಿನ ಜನರು ಸಾವಿಗೀಡಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮಂಗಳವಾರ ಆತಂಕ ವ್ಯಕ್ತಪಡಿಸಿದೆ. ಅಲ್ಲಿ ಆರೋಗ್ಯ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಸೋಂಕು ರೋಗಗಳು ಮತ್ತು ಮಕ್ಕಳನ್ನು ಅತಿಸಾರ ಬಾಧಿಸಬಹುದು ಎಂದು ಅದು ಎಚ್ಚರಿಕೆ ನೀಡಿದೆ. ಕಿರಿದಾದ ಪ್ರದೇಶದಲ್ಲಿ ಇಸ್ರೇಲ್ ನಡೆಸಿದ ಬಾಂಬಿಂಗ್ನಿಂದ 15,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಅದರಲ್ಲಿ ಶೇಕಡ 40ರಷ್ಟು ಮಕ್ಕಳು ಎಂಬ ಗಾಜಾ ಆರೋಗ್ಯ ಅಧಿಕಾರಿಗಳ ಅಂಕಿಸಂಖ್ಯೆಯನ್ನು ವಿಶ್ವ ಸಂಸ್ಥೆ ಕೂಡ ಮಾನ್ಯ ಮಾಡಿದೆ. ಇಷ್ಟು ಮಾತ್ರವಲ್ಲದೆ, ಇನ್ನಷ್ಟು ಜನರು ಕಟ್ಟಡಗಳ ಅವಶೇಷಗಳಡಿ ಹೂತು ಹೋಗಿರುವ ಸಾಧ್ಯತೆಯಿದೆ. ಗಾಜಾವನ್ನು ಆಳುತ್ತಿರುವ ಉಗ್ರಗಾಮಿ ಹಮಾಸ್ ಸಂಘಟನೆಯನ್ನು ಸರ್ವ ನಾಶ ಮಾಡಲು ಇಸ್ರೇಲ್ ಪಣ ತೊಟ್ಟಿದೆ.
ಬಾಲಕಿ ಡಿಸ್ಚಾರ್ಜ್: 50 ದಿನಗಳ ಒತ್ತೆಸೆರೆಯಿಂದ ಬಿಡುಗಡೆಗೊಂಡ ನಂತರ ಆಸ್ಪತ್ರೆಗೆ ದಾಖಲಿಸಲಾಗಿದ್ದ ಇಸ್ರೇಲ್-ಅಮೆರಿಕ ದ್ವಿಪೌರತ್ವ ಹೊಂದಿರುವ 4 ವರ್ಷದ ಬಾಲಕಿ ಅಬಿಗೇಲ್ ಏಡನ್ ಮಂಗಳವಾರ ತಡರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾಳೆ. ಅಬಿಗೇಲ್ಳ ನಾಲ್ಕನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಆಕೆ ಒತ್ತೆಸೆರೆಯಲ್ಲಿದ್ದಳು. ತನ್ನ ಪ್ರಜೆಯೊಬ್ಬಳನ್ನು ಹಮಾಸ್ ಬಿಡುಗಡೆ ಮಾಡಿರುವುದಕ್ಕೆ ಫಿಲಿಪ್ಪೀನ್ಸ್ ಸಂತಸ ವ್ಯಕ್ತಪಡಿಸಿದೆ.
ಟನ್ಗಟ್ಟಲೆ ಆಹಾರ, ಔಷಧಿ: ಗಾಜಾದಲ್ಲಿ ವಿತರಣೆಗಾಗಿ 54,000 ಪೌಂಡ್ಗೂ ಅಧಿಕ ಆಹಾರ ಸಾಮಗ್ರಿ ಮತ್ತು ಔಷಧಗಳನ್ನು ಈಜಿಪ್ಟ್ಗೆ ಏರ್ಲಿಫ್ಟ್ ಮಾಡಲಾಗಿದೆ. ಮತ್ತೆ ಇನ್ನೂ 2 ವಿಮಾನಗಳಲ್ಲಿ ಅಗತ್ಯ ಸಾಮಗ್ರಿಗಳನ್ನು ಕಳಿಸಲಾಗುತ್ತದೆ ಎಂದು ಅಮೆರಿಕ ತಿಳಿಸಿದೆ.