ಭಯಾನಕ ವಿಡಿಯೋ ಹರಿಬಿಟ್ಟ ​ಹಮಾಸ್; ನನ್ನ ಸಮಾಧಿಯನ್ನು ನಾನೇ ಅಗೆಯುತ್ತಿದ್ದೇನೆ ಎಂದ ಇಸ್ರೇಲ್​ ಪ್ರಜೆ! Israel

Israeli citizen
Published on

Israel: ಪ್ಯಾಲೆಸ್ಟೀನಿಯನ್ ಉಗ್ರಗಾಮಿ ಸಂಘಟನೆ ಹಮಾಸ್ ತನ್ನ ಸೆರೆಯಲ್ಲಿರುವ ಇಸ್ರೇಲಿ ಒತ್ತೆಯಾಳುಗಳ ವಿಡಿಯೋಗಳನ್ನು ಬಿಡುಗಡೆ ಮಾಡಿದೆ. ಒತ್ತೆಯಾಳುಗಳ ವಿಡಿಯೋ ನೋಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ತೀವ್ರ ಆಘಾತವಾಗಿದೆ ಎಂದು ವರದಿಯಾಗಿದೆ.

ನೆತನ್ಯಾಹು ಅವರ ಕಚೇರಿ ಹೇಳಿರುವ ಪ್ರಕಾರ, ವಿಡಿಯೋದಲ್ಲಿ ಕಂಡಿರುವ ಇಬ್ಬರು ಒತ್ತೆಯಾಳುಗಳಾದ ರೋಮ್ ಬ್ರಾಸ್ಲಾವ್ಸ್ಕಿ ಮತ್ತು ಎವ್ಯಾಟರ್ ದಾವಿ ಅವರ ಕುಟುಂಬಗಳೊಂದಿಗೆ ನೆತನ್ಯಾಹು ಮಾತನಾಡಿದ್ದಾರೆ.ಅಲ್ಲದೆ, ನಮ್ಮ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ಇಸ್ರೇಲಿ ಪ್ರಧಾನಿ ಒತ್ತೆಯಾಳುಗಳ ಕುಟುಂಬದವರಿಗೆ ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಇಸ್ರೇಲ್​ ರಾಜಧಾನಿಯಾದ ಟೆಲ್ಅವೀವ್​ನಲ್ಲಿ ಉಳಿದ ಬಂಧಿತರ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ನೆತನ್ಯಾಹು ಸರ್ಕಾರವನ್ನು ಒತ್ತಾಯಿಸಿ ಸಾವಿರಾರು ಜನ ಱಲಿ ನಡೆಸಿದರು.

ಕಳೆದ ಕೆಲವು ದಿನಗಳಲ್ಲಿ, ಹಮಾಸ್, 2023ರ ಅಕ್ಟೋಬರ್ 7ರಂದು, ಇಸ್ರೇಲ್ ಮೇಲಿನ ದಾಳಿಯ ಸಮಯದಲ್ಲಿ ಸೆರೆಹಿಡಿಯಲಾದ ಇಬ್ಬರು ಒತ್ತೆಯಾಳುಗಳನ್ನು ತೋರಿಸುವ ಮೂರು ವಿಡಿಯೋಗಳನ್ನು ಬಿಡುಗಡೆ ಮಾಡಿದೆ.

ವಿಡಿಯೋದಲ್ಲಿ ಏನಿದೆ..?

ಹಮಾಸ್​ ಬಿಡುಗಡೆ ಮಾಡಿರುವ ವಿಡಿಯೋಗಳಲ್ಲಿ, ಒತ್ತೆಯಾಳುಗಳಾದ ರೋಮ್ ಬ್ರಾಸ್ಲಾವ್ಸ್ಕಿ ಮತ್ತು ಎವ್ಯಾಟರ್ ಡೇವಿಡ್ ಅವರನ್ನು ಹಮಾಸ್ ನಾಯಕರು ಭೂಗತ ಸುರಂಗಗಳಲ್ಲಿ ಸೆರೆಯಲ್ಲಿಟ್ಟಿರುವುದನ್ನು ಕಾಣಬಹುದು.

ಪ್ಯಾಲೆಸ್ಟೀನಿಯನ್ ಇಸ್ಲಾಮಿಸ್ಟ್ ಗುಂಪುಗಳು ಹಂಚಿಕೊಂಡಿರುವ ಕ್ಲಿಪ್‌ಗಳಲ್ಲಿ, ಜರ್ಮನ್-ಇಸ್ರೇಲಿ ದ್ವಿ ರಾಷ್ಟ್ರೀಯ 21 ವರ್ಷದ ಬ್ರಾಸ್ಲಾವ್ಸ್ಕಿ ಮತ್ತು 24 ವರ್ಷದ ಡೇವಿಡ್ ಇಬ್ಬರೂ ದುರ್ಬಲ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವಂತೆ ಕಾಣುತ್ತಾರೆ. ಒಂದು ವೀಡಿಯೊದಲ್ಲಿ, ಇಸ್ರೇಲಿ ಒತ್ತೆಯಾಳು ಎವ್ಯಾಟರ್ ಡೇವಿಡ್ ಕ್ಯಾಮೆರಾ ಮುಂದೆ ತನ್ನ ಸಮಾಧಿಯನ್ನು ತಾನೇ ಅಗೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

ನಾನು ಈಗ ಮಾಡುತ್ತಿರುವುದು ನನ್ನ ಸಮಾಧಿಯನ್ನು ನಾನೇ ಅಗೆಯುವುದು. ಪ್ರತಿದಿನ ನನ್ನ ದೇಹವು ದುರ್ಬಲಗೊಳ್ಳುತ್ತಿದೆ. ನಾನು ನೇರವಾಗಿ ನನ್ನ ಸಮಾಧಿ ಹತ್ತಿರ ನಡೆಯುತ್ತಿದ್ದೇನೆ. ಅಲ್ಲಿ ನನ್ನನ್ನು ಸಮಾಧಿ ಮಾಡಲಾಗುವ ಜಾಗ ಇದೆ. ನನ್ನ ಕುಟುಂಬದೊಂದಿಗೆ ನಾನು ಮಲಗುವ ಸಮಯ ಮೀರಿದೆ. ಡೇವಿಡ್ ಹೇಳಿಕೆಯ ಕೊನೆಯಲ್ಲಿ ದುಃಖಿಸುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು.

ವಿಡಿಯೋಗಳನ್ನು ಖಂಡಿಸಿದ ಫ್ರಾನ್ಸ್ ಮತ್ತು EU

ಹಮಾಸ್ ಬಿಡುಗಡೆ ಮಾಡಿದ ವಿಡಿಯೋಗಳು ಒತ್ತೆಯಾಳುಗಳ ಚಿಕಿತ್ಸೆ ಮತ್ತು ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಕ್ಷಾಮದ ಪರಿಸ್ಥಿತಿಯ ಬಗ್ಗೆ ಜಾಗತಿಕ ಟೀಕೆಗೆ ಗುರಿಯಾಗಿವೆ. ಯುರೋಪಿಯನ್ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥ ಕಾಜಾ ಕಲ್ಲಾಸ್ ಅವರು ಈ ಚಿತ್ರಗಳು ಭಯಾನಕವಾಗಿವೆ ಮತ್ತು ಹಮಾಸ್‌ನ ಅನಾಗರಿಕತೆಯನ್ನು ಬಹಿರಂಗಪಡಿಸುತ್ತಿವೆ ಎಂದು ಹೇಳಿದರು. ಎಲ್ಲಾ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಕರೆ ನೀಡಿದರು.

ಅಲ್ಲದೆ, ಎಕ್ಸ್​ನಲ್ಲಿನ ಪೋಸ್ಟ್‌ ಮಾಡಿರುವ ಫ್ರೆಂಚ್​​ ವಿದೇಶಾಂಗ ಸಚಿವ ಜೀನ್-ನೋಯೆಲ್ ಬ್ಯಾರಟ್, ಹಮಾಸ್ ಗಾಜಾದಲ್ಲಿ 666 ದಿನಗಳ ಕಾಲ ಬಂಧನದಲ್ಲಿದ್ದ ಇಸ್ರೇಲಿ ಒತ್ತೆಯಾಳುಗಳನ್ನು ಯಾವುದೇ ಷರತ್ತುಗಳಿಲ್ಲದೆ ಬಿಡುಗಡೆ ಮಾಡಬೇಕು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net