

Syrian Children: 25 ವರ್ಷಗಳ ಕಾಲ ಸಿರಿಯಾ ದೇಶವನ್ನಾಳಿದ ಮಾಜಿ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಆಡಳಿತಕ್ಕೆ ಯುಗಾಂತ್ಯವಾಡಿದ ಬಂಡುಕೋರರ ಪಡೆಗಳು (Syrian Rebels) ಅಸ್ಸಾದ್ ಆಡಳಿತಾವಧಿಯಲ್ಲಿದ್ದ ಭವ್ಯ ಬಂಗಲೆ, ಐಷಾರಾಮಿ ಕಾರುಗಳು ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ತಮ್ಮ ಸ್ವಾಧಿನಕ್ಕೆ ಪಡೆದಿರುವುದು ಇದೀಗ ಜಗಜಾಹೀರಾಗಿದೆ. ಸಿರಿಯಾ ದೇಶವನ್ನು ಅಸ್ಸಾದ್ರಿಂದ ಸಂಪೂರ್ಣವಾಗಿ ಕಿತ್ತುಕೊಂಡಿರುವ ಬಂಡುಕೋರರು, ಸಿರಿಯಾದ ರಾಜಧಾನಿ ಡಮಾಸ್ಕಸ್ ಅನ್ನು ತಮ್ಮ ಅಧಿಕಾರಕ್ಕೆ ತೆಗೆದುಕೊಂಡಿದ್ದು, ಹೊಸ ಆಡಳಿತ ಸ್ಥಾಪನೆಗೆ ಏನೇನು ಬೇಕಿದೆಯೋ ಅದನ್ನೆಲ್ಲಾ ಚಾಲ್ತಿಗೆ ತರುವಲ್ಲಿ ಮುಂದಾಗಿದ್ದಾರೆ.
ಸಿರಿಯನ್ ಚುನಾವಣೆಗೆ ಇನ್ನೂ ನಾಲ್ಕು ವರ್ಷಗಳ ಸಮಯ ಬೇಕು ಎಂದಿರುವ ಬಂಡಾಯ ನಾಯಕ ಅಹ್ಮದ್ ಅಲ್-ಶರಾ, ಸದ್ಯಕ್ಕೆ ಚುನಾವಣೆ ಮಾತುಗಳು ದೂರ ಎಂದು ಹೇಳಿದ್ದಾರೆ. ಇನ್ನು ಇದು ಒಂದು ಸೈಡ್ ಕಥೆಯಾದರೆ, ಸಿರಿಯಾದಲ್ಲಿ ಸುಮಾರು 14 ವರ್ಷಗಳ ಅಂತರ್ಯುದ್ಧದ ನಂತರ ಅರ್ಧದಷ್ಟು ಶಾಲಾ ವಯಸ್ಸಿನ ಮಕ್ಕಳು ಶಿಕ್ಷಣವನ್ನು ಕಳೆದುಕೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ವಯಸ್ಸು ಮೀರುತ್ತಿದೆ, ಮಕ್ಕಳಿಗೆ ಶಿಕ್ಷಣದ ಅಗತ್ಯತೆ ಹೆಚ್ಚಿದೆ. ಈ ಬಗ್ಗೆ ತಕ್ಷಣದ ಕ್ರಮ ಜರುಗಬೇಕಿದೆ ಎಂದು 'ಸೇವ್ ದಿ ಚಿಲ್ಡ್ರನ್' ಎಂಬ ಚಾರಿಟಿ ಆಗ್ರಹಿಸಿದೆ.
"ಬಹುಪಾಲು ಸಿರಿಯನ್ ಮಕ್ಕಳಿಗೆ ಆಹಾರ ಸೇರಿದಂತೆ ತಕ್ಷಣದ ಮಾನವೀಯ ಸಹಾಯದ ಅಗತ್ಯವಿದೆ ಎಂದು ಚಾರಿಟಿ ಹೇಳಿದೆ. ಕನಿಷ್ಠ ಅರ್ಧದಷ್ಟು ಮಂದಿಗೆ ಯುದ್ಧದ ಆಘಾತದಿಂದ ಹೊರಬರಲು ಮಾನಸಿಕ ಸಹಾಯದ ಅಗತ್ಯವಿದೆ. ಸುಮಾರು 3.7 ಮಿಲಿಯನ್ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಅವರನ್ನು ಶಾಲೆಗೆ ಹೋಗುವಂತೆ ಮಾಡುವುದು ನಮ್ಮ ಮುಂದಿರುವ ದೊಡ್ಡ ಸವಾಲು. ಇದಕ್ಕೆ ತಕ್ಷಣದ ಕ್ರಮದ ಅಗತ್ಯವಿದೆ" ಎಂದು ಚಾರಿಟಿ ನಿರ್ದೇಶಕ ರಾಶಾ ಮುಹ್ರೆಜ್ ರಾಜಧಾನಿ ಮಾಹಿತಿ ಹಂಚಿಕೊಂಡಿದ್ದಾರೆ.
"ಮಕ್ಕಳು ಮತ್ತೆ ಶಿಕ್ಷಣಕ್ಕೆ ಮರಳಬೇಕು. ಅವರಿಗೆ ಆರೋಗ್ಯ, ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದು ಅತೀ ಮುಖ್ಯವಾಗಿದೆ. ಅಂತರ್ಯುದ್ಧ, ನೈಸರ್ಗಿಕ ವಿಕೋಪಗಳು ಮತ್ತು ಆರ್ಥಿಕ ಬಿಕ್ಕಟ್ಟುಗಳಿಂದ ಇಲ್ಲಿನ ಮಕ್ಕಳು ಶಿಕ್ಷಣ, ಆರೋಗ್ಯ ರಕ್ಷಣೆ, ಆಶ್ರಯ ಸೇರಿದಂತೆ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಇದಕ್ಕೆಲ್ಲ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಹಾಗೂ ಮಕ್ಕಳ ವಯಸ್ಸು ಮೀರಿ ಹೋಗುವ ಮುನ್ನ ಅವರಿಗೆ ಶಿಕ್ಷಣ ವ್ಯವಸ್ಥೆ ಮಾಡಬೇಕು" ಎಂದು ಮುಹ್ರೆಜ್ ತಿಳಿಸಿದ್ದಾರೆ,(ಏಜೆನ್ಸೀಸ್).