ಜಿಲ್ಲೆಯಲ್ಲಿ ಕಸಾಪ ಒಡೆದ ಮನೆ: ಮನಸ್ಥಾಪಕ್ಕೆ ನಾಂದಿಯಾದ ಮಹೇಶ ಜೋಶಿ ನಿಲುವು

Controversy in the district Kasapa Mandya
Published on

ಮಂಡ್ಯ: ಕನ್ನಡ ನಾಡು, ನುಡಿ ಎಂದರೆ ಎಲ್ಲರನ್ನೂ ಒಗ್ಗೂಡಿಸುತ್ತದೆ. ಭಾಷೆ ವಿಷಯವೆಂದರೆ ಜಾತಿ, ಧರ್ಮವನ್ನು ಮೀರಿದ್ದು. ಅದರಲ್ಲಿಯೂ ಮಂಡ್ಯದಲ್ಲಿ ಒಂದೆಜ್ಜೆ ಮುಂದೆ. ಆದರೀಗ ಭಾಷೆಗಾಗಿ ಎಲ್ಲರನ್ನೂ ಒಗ್ಗಟ್ಟು ಮೂಡಿಸಬೇಕಾದ ಕನ್ನಡ ಸಾಹಿತ್ಯ ಪರಿಷತ್ ಒಡೆದ ಮನೆಯಾಗಿದೆ.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆಂದು ಹಗಲು ರಾತ್ರಿಯೆನ್ನದೇ ದುಡಿದವರನ್ನು ಕಡೆಗಣಿಸಿ, ಆಪ್ತ ಬಳಗಕ್ಕೆ ಜಿಲ್ಲಾ ಕಸಾಪದಲ್ಲಿ ಅಧಿಕಾರ ಕೊಟ್ಟ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ನಿಲುವು ಪರಿಷತ್‌ಗೆ ದುಬಾರಿಯಾಗುತ್ತಿದೆ. ಬಹುತೇಕರನ್ನು ಕೈಬಿಟ್ಟು ಕೆಲವರಿಂದಷ್ಟೇ ಕಸಾಪ ಕಟ್ಟಲು ಸಾಧ್ಯವೇ ಎನ್ನುವ ಪ್ರಶ್ನೆ ಉದ್ಭವಿಸಿದೆ. ಜೋಶಿ ಅವರ ನಿಲುವಿನ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ.

ಇನ್ನು ಜಿಲ್ಲಾಧ್ಯಕ್ಷ ಸ್ಥಾನ ವಹಿಸಿಕೊಂಡ ಪ್ರೊ.ಎಚ್.ಎಸ್.ಮುದ್ದೇಗೌಡ, ತಮ್ಮ ಮೊದಲ ಸುದ್ದಿಗೋಷ್ಠಿಯಲ್ಲಿಯೇ ಕಸಾಪ ಭವನ ಮಾರಾಟ ಮಾಡುವುದಾಗಿ ಘೋಷಣೆ ಮಾಡಿ ವಿವಾದ ಸೃಷ್ಟಿಸಿದರು. ಮಾತ್ರವಲ್ಲದೆ ಜಿಲ್ಲೆಯಲ್ಲಿ ಹಲವರ ಕೆಂಗಣ್ಣಿಗೆ ಗುರಿಯಾದರು. ಆದರೆ ಯಾವಾಗ ಕಟುವಾದ ಟೀಕೆ ಟಿಪ್ಪಣಿ ಕೇಳಿಬಂದವೋ, ಎಚ್ಚೆತ್ತುಕೊಂಡು ತಮ್ಮ ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ. ಆದರೂ ಮಹೇಶ ಜೋಶಿ ಅವರನ್ನು ಓಲೈಸಿಕೊಳ್ಳಲು ಜಿಲ್ಲೆಯಲ್ಲಿ ತಮ್ಮದೇ ಆದ ಸಂಘ ಸಂಸ್ಥೆಗಳ ಮೂಲಕ ನಾಡು, ನುಡಿ, ಸಂಸ್ಕೃತಿಗೆ ಸೇವೆ ಸಲ್ಲಿಸುತ್ತಿರುವವರ ವಿರುದ್ಧ ಹರಿಹಾಯ್ದಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮುಂದಿನ ದಿನದಲ್ಲಿ ಮುದ್ದೇಗೌಡ ಅವರು ನಡೆಸಬಹುದಾದ ಕಸಾಪ ಚಟುವಟಿಕೆಗೆ ಸಹಕಾರ ಸಿಗಲಿದೆಯೇ ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net