

ಮಳಖೇಡ (ಕಲಬುರಗಿ): ಕನ್ನಡಕ್ಕೆ ಮೊದಲ ಕೃತಿ ನೀಡಿದ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ (ಮಾನ್ಯಖೇಟ)ದಲ್ಲಿ ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗರಿ, ರಾಯಚೂರು ಹಾಗೂ ಕಿತ್ತೂರು ಕರ್ನಾಟಕದ ವಿಜಯಪುರ ಜಿಲ್ಲೆಯ 51,900 ಜನರಿಗೆ ಗುರುವಾರ ಹಕ್ಕುಪತ್ರ ವಿತರಿಸಲಾಯಿತು. ಸಾಂಕೇತಿಕವಾಗಿ 5 ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹಕ್ಕುಪತ್ರ ವಿತರಣೆ ಮಾಡಿದರು. ಈ ವೇಳೆ ಮೋದಿ ಅವರನ್ನ ಹತ್ತಿರದಿಂದಲೇ ಕಣ್ತುಂಬಿಕೊಂಡ ತಾಂಡಾ ಜನರು ಭಾವುಕರಾದರು.
ರಾಷ್ಟ್ರಕೂಟರ ನಾಡು ಮಳಖೇಡದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಗಿನ್ನೆಸ್ ದಾಖಲೆಯಾಯಿತು. ದೇಶದ ಇತಿಹಾಸದಲ್ಲಿಯೇ ಏಕಕಾಲಕ್ಕೆ 51,900 ತಾಂಡಾ ವಾಸಿಗಳಿಗೆ ಹಕ್ಕುಪತ್ರ ಹಂಚಿಕೆ ಆಗಿರುವುದು ಇದೇ ಮೊದಲು. ಆ ಮೂಲಕ ಲಂಬಾಣಿ ತಾಂಡಾ, ಹಟ್ಟಿ, ಹಾಡಿ, ಕುರುಬರ ಮತ್ತು ಗೊಲ್ಲರಹಟ್ಟಿ, ವಡ್ಡರಹಟ್ಟಿಯಲ್ಲಿರುವ ಅಲೆಮಾರಿ ಜನಾಂಗದವರಿಗೆ ಕಾಯಂ ಸೂರು ಸಿಕ್ಕಿದೆ.
ಕಲಬುರಗಿ ಜಿಲ್ಲೆಯ 27,267 ಕುಟುಂಬಕ್ಕೆ, ಬೀದರ್ನ 7,500, ರಾಯಚೂರಿನ 3,500, ಯಾದಗಿರಿಯ 11,200, ವಿಜಯಪುರ ಜಿಲ್ಲೆಯ 2,605 ಜನರು ಸೇರಿದಂತೆ 51,900 ಜನರಿಗೆ ಹಕ್ಕುಪತ್ರ ವಿತರಣೆ ಮಾಡಲಾಯಿತು. 342 ತಾಂಡಾಗಳನ್ನು ಕಂದಾಯ ಗ್ರಾಮವಾಗಿ ಘೋಷಣೆ ಮಾಡಲಾಯಿತು. ಇದು ಗಿನ್ನೆಸ್ ಪುಟ ಸೇರಿತು.
ರಾಜ್ಯಪಾಲ ಥಾವರ್ಚಂದ್ ಗೆಲ್ಹೋಟ್, ಸಿಎಂ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ, ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಪಿ.ರಾಜೀವ್ ಕುಡಚಿ, ಸಂಸದ ಡಾ.ಉಮೇಶ ಜಾಧವ್, ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್, ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ, ಬಸವರಾಜ ಮತ್ತಿಮೂಡ, ಡಾ.ಅವಿನಾಶ್ ಜಾಧವ, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಇತರರು ಇದ್ದರು.