

ಬೆಂಗಳೂರು: ಬಿಟ್ ಕಾಯಿನ್ ಮತ್ತು ಡ್ರಗ್ಸ್ ದಂಧೆ ಪ್ರಕರಣ ಸಂಬಂಧ 2020ರಲ್ಲಿ ಸಿಸಿಬಿ ಬಲೆಗೆ ಸಿಕ್ಕ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪ್ರಕರಣ ರಾಜಕೀಯ ತಿರುವು ಪಡೆದಿದೆ. ಶ್ರೀಕಿ ಸ್ನೇಹ ವಲಯದಲ್ಲಿ ಗುರುತಿಸಿಕೊಂಡಿರುವರು ಯಾರು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಡಾರ್ಕ್ನೆಟ್ನಲ್ಲಿ ಡ್ರಗ್ಸ್ ಖರೀದಿ ಮತ್ತು ಮಾರಾಟ ಪ್ರಕರಣ ಸಂಬಂಧ ಶ್ರೀಕಿಯನ್ನು ಬಂಧಿಸಿದ ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ಬಿಟ್ ಕಾಯಿನ್ ದಂಧೆ ಬೆಳಕಿಗೆ ಬಂದು 9 ಕೋಟಿ ರೂ. ಮೌಲ್ಯದ 31 ಬಿಟ್ ಕಾಯಿನ್ಗಳನ್ನು ಜಪ್ತಿ ಮಾಡಿತ್ತು. ತನಿಖೆ ಪೂರ್ಣಗೊಳಿಸಿ 2021ರ ಮಾರ್ಚ್ನಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಕೂಡ ಸಲ್ಲಿಸಿದೆ.
ಇದೀಗ ಮತ್ತೆ ಶ್ರೀಕಿ ಚರ್ಚೆಗೆ ಕಾರಣ ಆಗಿದ್ದಾನೆ. ಜಯನಗರದ ಶ್ರೀಕಿ ವಿದೇಶದಲ್ಲಿ ವ್ಯಾಸಂಗ ಮಾಡಿದ್ದು, ತಾಂತ್ರಿಕ ನಿಪುಣನಾಗಿದ್ದಾನೆ. ದೇಶ-ವಿದೇಶದ ಸರ್ಕಾರಿ ಮತ್ತು ಖಾಸಗಿ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿ ಹಣ ಲಪಾಟಿಯಿಸುವಲ್ಲಿ ಕುಖ್ಯಾತಿ ಪಡೆದಿದ್ದ. ಕ್ರಿಪ್ಪೋ ಕರೆನ್ಸಿಗಳಾದ ಬಿಟ್ ಕಾಯಿನ್, ವೈಎಫ್ಎ, ಇಥೆರಿಯಂ ಖಾತೆಗಳಲ್ಲಿ ಕೋಟ್ಯಂತರ ಮೌಲ್ಯದ ಕರೆನ್ಸಿಯನ್ನು ದೋಚಿದ್ದ.
2019ರಲ್ಲಿ ರಾಜ್ಯ ಸರ್ಕಾರದ ಇ ಪ್ರಕ್ಯೂರ್ವೆುಂಟ್ ವೆಬ್ಸೈಟ್ ಹ್ಯಾಕ್ ಮಾಡಿ 11 ಕೋಟಿ ರೂ. ಎಗರಿಸಿದ್ದ ಆರೋಪ ಕೇಳಿ ಬಂದಿತ್ತು. ಸಿಸಿಬಿ ತನಿಖೆ ವೇಳೆ 3 ಬಿಟ್ ಕಾಯಿನ್ ಎಕ್ಸ್ಚೆಂಜ್ ಏಜೆನ್ಸಿಗಳು, 10 ಪೋಕರ್ ವೆಬ್ಸೈಟ್ಗಳು ಮತ್ತು 3 ಮಾಲ್ವೇರ್ ಎಕ್ಸ್ಪ್ಲೋಟೆಡ್ ಅನ್ನು ಶ್ರೀಕಿ ಹ್ಯಾಕ್ ಮಾಡಿದ್ದು ಬೆಳಕಿಗೆ ಬಂದಿತ್ತು. ವಿದೇಶಿ ಕಂಪನಿಗಳಿಗೆ ಇಂಟರ್ಪೋಲ್ ಮುಖಾಂತರ ಸಿಸಿಬಿ ಮಾಹಿತಿ ಸಹ ನೀಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಇ-ಪ್ರಕ್ಯೂರ್ವೆುಟ್ ವೆಬ್ಸೈಟ್ ಹ್ಯಾಕ್ ಪ್ರಕರಣ ಸಂಬಂಧ ಸಿಐಡಿ ಸೈಬರ್ ವಿಭಾಗದ ಪೊಲೀಸರು ಪ್ರತ್ಯೇಕವಾಗಿ ತನಿಖೆ ನಡೆಸಿದ್ದಾರೆ. ಆರೋಪಿಯಿಂದ ಹಣ ಜಪ್ತಿ ಮಾಡಿದ್ದ ಸಿಐಡಿ, ಶ್ರೀಕಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದರು. ಸಿಐಡಿ ಪ್ರಾಥಮಿಕ ಹಂತದ ಆರೋಪ ಪಟ್ಟಿ ಸಲ್ಲಿಕೆಗೆ ಸಿದ್ದತೆ ನಡೆಸಿದೆ.
ಹೋಟೆಲ್, ರೆಸಾರ್ಟ್ಗಳೇ ಅಡ್ಡೆ: ಬೆಂಗಳೂರಿನ ಪಂಚಾತಾರ ಹೋಟೆಲ್ಗಳು ಹಾಗೂ ನಗರ ಹೊರವಲಯದ ರೆಸಾರ್ಟ್ಗಳೇ ಹ್ಯಾಕರ್ ಶ್ರೀಕಿಯ ಅಡ್ಡೆಗಳಾಗಿದ್ದವು. ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿ, ಅಲ್ಲಿ ಕಳವು ಮಾಡಿದ ಬಿಟ್ ಕಾಯಿನ್ಗಳನ್ನು ಟ್ರೇಡರ್ ರಾಬಿನ್ ಖಂಡೇಲ್ವಾಲ್, ಟ್ರೇಡರ್ಗಳಿಗೆ ಮಾರುತ್ತಿದ್ದ. ಟ್ರೇಡರ್ಗಳಿಂದ ತನ್ನ ಸಹಚರರ ಬ್ಯಾಂಕ್ ಖಾತೆಗೆ ಹಾಗೂ ಹವಾಲ ಮುಖಾಂತರ ಹಣ ಸ್ವೀಕರಿಸಿ ಶ್ರೀಕಿ ಐಷಾರಾಮಿ ಜೀವನ ನಡೆಸುತ್ತಿದ್ದ. ಬಿಟ್ ಕಾಯಿನ್ ಹ್ಯಾಕಿಂಗ್ ಮತ್ತು ಮಾಹಿತಿ ಪಡೆಯಲು ಪ್ರೖೆವೇಟ್ ಕೀಗಳನ್ನು ಕಳವು ಮಾಡಲು, ವರ್ಗಾವಣೆ ಮಾಡಿಕೊಳ್ಳಲು ಹ್ಯಾಕಿಂಗ್ ಟೂಲ್ ಹಾಗೂ ವೆಬ್ಸೈಟ್ಗಳನ್ನು ಬಳಸಿದ್ದ. ಡಾರ್ಕ್ ವೆಬ್ಸೈಟ್ ಮೂಲಕ ವಿದೇಶದಲ್ಲಿ ಡ್ರಗ್ಸ್, ಕದ್ದಿರುವ ಬಿಟ್ ಕಾಯಿನ್ಗಳನ್ನು ಬಳಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.