

ಮೈಸೂರು: ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಮಗು ಜೆಡಿಎಸ್. ಅದು ಮಿಠಾಯಿ ತೋರಿಸಿದವರ ಕಡೆ ಹೋಗುತ್ತೆ. ಪಾಪ ಅವರ ಬಗ್ಗೆ ಏನ್ ಮಾತನಾಡುವುದು ಬಿಡಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಲೇವಡಿ ಮಾಡಿದರು.
ವಿಧಾನ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಸಂಸತ್‌ಗೆ ನಮಸ್ಕರಿಸಿ ಒಳಗೆ ಹೋಗುತ್ತಾರೆ. ಆದರೆ, ಇಲ್ಲೊಬ್ಬರು (ಸಿದ್ದರಾಮಯ್ಯ) ಅಂಥ ಸಾರ್ವಭೌಮತ್ವದ ಸದನದ ಬಾಗಿಲನ್ನು ಬೂಟು ಕಾಲಿನಲ್ಲಿ ಒದೆಯುತ್ತಾರೆ. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ದೊಡ್ಡ, ದೊಡ್ಡವರೇ ಮಂಗಳವಾರ ಆ ಗೌರವವನ್ನು ಕೊಚ್ಚಿ ಹಾಕಿದರು ಎಂದು ಬೇಸರ ವ್ಯಕ್ತಪಡಿಸಿದರು.
ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ನಾನು ತುಂಬ ವರ್ಷಗಳ ಸ್ನೇಹಿತರು. ಅವರು ಬಹಳ ಸ್ವಾಭಿಮಾನಿ. ಒಂದು ತಿಂಗಳ ಹಿಂದೆಯೇ ರಾಜೀನಾಮೆ ನೀಡುತ್ತೇನೆ ಅಂಥ ಹೇಳಿದ್ದರು. ಆದರೆ, ಅವರಿಗೆ ಆ ಅವಕಾಶ ನೀಡಲಿಲ್ಲ. ಪರಿಷತ್‌ನಲ್ಲಿ ನಡೆದ ಘಟನೆಯಿಂದ ನಾಡಿನ ಜನರಿಗೆ ನೋವಾಗಿದೆ. ಇನ್ನು ಮುಂದೆ ಈ ರೀತಿಯ ಘಟನೆ ಆಗದಂತೆ ಎಚ್ಚರ ವಹಿಸಬೇಕೆಂದು ಹೇಳಿದರು.