

ಗುರುಗ್ರಾಮ್: ಬೀದಿ ನಾಯಿಗಳನ್ನು ಮನಬಂದಂತೆ ಥಳಿಸಿ ನಂತರ ತನ್ನ ಮನೆಯ ಮೇಲ್ಛಾವಣಿಯಿಂದ ರಸ್ತೆಗೆ ಎಸೆದಿರುವ ಮನಕಲುಕುವ ಘಟನೆ ಗುರುಗ್ರಾಮ್ನಲ್ಲಿ ನಡೆದಿದೆ.
ಹೋಶಿಯಾರ್ ಸಿಂಗ್ ಎಂಬಾತನೇ ಈ ನೀಚ ಕೃತ್ಯ ಎಸಗಿದ ಆರೋಪಿಯಾಗಿದ್ದು, ಈತನ ವಿರುದ್ಧ ಪ್ರಾಣಿ ಹಕ್ಕುಗಳ ಕಾರ್ಯಕರ್ತ ಅನುಭವ್ ಶರ್ಮಾ ದೂರು ಸಲ್ಲಿಸಿದ್ದಾರೆ. ಇನ್ನು ತೀವ್ರವಾಗಿ ಗಾಯಗೊಂಡಿದ್ದ ಎರಡು ನಾಯಿಗಳ ಪೈಕಿ ಒಂದು ಮೃತಪಟ್ಟಿದ್ದು, ಇನ್ನೊಂದು ನಾಯಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ವಿದ್ಯಾರ್ಥಿನಿಯೊಂದಿಗೆ ಉಪನ್ಯಾಸಕನ ಲವ್ವಿ ಡವ್ವಿ; ಕಾಲೇಜಿನ ಮುಂದೆ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಜೂನ್ 1ರಂದು ಆರೋಪಿಯು ಎರಡು ಬೀದಿ ನಾಯಿಗಳನ್ನು ಬೀದಿಯಿಂದ ಎತ್ತಿಕೊಂಡು ನಂತರ ಅವುಗಳನ್ನು ಕೆಟ್ಟದಾಗಿ ಥಳಿಸಿ ಕೊನೆಗೆ ತನ್ನ ಮನೆಯ ಮೇಲ್ಛಾವಣಿಯಿಂದ ಕೆಳಗಿನ ರಸ್ತೆಗೆ ಎಸೆದಿದ್ದಾನೆ ಎಂದು ಶರ್ಮಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೇ, ಆರೋಪಿಯು ಈ ಹಿಂದೆ ಮೇ ತಿಂಗಳಲ್ಲಿ ಇತರ ಎರಡು ನಾಯಿಗಳನ್ನು ಸಹ ಕೊಂದಿದ್ದಾರೆ ಎಂದು ಶರ್ಮಾ ತಿಳಿಸಿದ್ದಾರೆ.
ಆರೋಪಿಯ ಈ ಅಮಾನುಷ ಕೃತ್ಯ ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಠಿಣ ಪ್ರಾಣಿ ಸಂರಕ್ಷಣಾ ಕಾನೂನುಗಳನ್ನು ಜಾರಿಗೆ ತರವಂತೆ ನೆಟ್ಟಿಗರು ಒತ್ತಾಯಿಸಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)