

ಧರ್ಮ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರದೂ ಆಗಿದೆ. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ಮೌಲ್ಯಗಳು ಯಾವಾಗಲೂ ಶಾಶ್ವತವಾಗಿರುತ್ತವೆ. ಸಂಪತ್ತು ಬೆಳೆದಂತೆ ಮನುಷ್ಯರಲ್ಲಿ ಮಾನವೀಯ ಸಂಬಂಧಗಳು ಗಟ್ಟಿಗೊಳ್ಳ ಬೇಕಲ್ಲದೇ ಸಡಿಲಗೊಳ್ಳಬಾರದು. ಇದು ಸಂಸ್ಕಾರ ಸದ್ವಿಚಾರಗಳಿಂದ ಪ್ರಾಪ್ತವಾಗುವುದೇ ಹೊರತು ಹಣದಿಂದಲ್ಲ. ಜಗದಲ್ಲಿ ನೀತಿ, ಸ್ನೇಹ, ಸೌಜನ್ಯ ಮತ್ತು ಸಾಮರಸ್ಯ ಬೆಳೆಯಬೇಕೆಂಬ ಶಿವ ಸಂಕಲ್ಪದಂತೆ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಪರಶಿವನ ಪಂಚ ಮುಖಗಳಿಂದ ಆವಿರ್ಭವಿಸಿ ಭೂ ಮಂಡಲದಲ್ಲಿ ವೀರಶೈವ ಧರ್ಮವನ್ನು ಹುಟ್ಟು ಹಾಕಿದ್ದನ್ನು ಇತಿಹಾಸದ ಪುಟಗಳಿಂದ ತಿಳಿಯಬಹುದು.
ಫಾಲ್ಗುಣ ಶುದ್ಧ ತ್ರಯೋದಶಿ ಶುಭ ಘಳಿಗೆಯಲ್ಲಿ ಶ್ರೀ ರೇಣುಕಾಚಾರ್ಯರು ಕೊಲನುಪಾಕ ಶ್ರೀ ಸೋಮೇಶ್ವರ ಮಹಾಲಿಂಗದಿಂದ ಅವತರಿಸಿ ಜನರ ಅಜ್ಞಾನ ಪರಿಹರಿಸಿ ಜ್ಞಾನ ಸನ್ಮಾರ್ಗದತ್ತ ಕರೆತಂದ ಇತಿಹಾಸವನ್ನು ಮರೆಯಬಾರದು. ಬೇವು ಬಿತ್ತಿ ಮಾವು ಬಯಸಿದರೆ ಸಿಗಲಾರದು. ಬೆಳೆದ ಮರ, ಹರಿಯುವ ನೀರು, ಬೀಸುವ ಗಾಳಿ ಮತ್ತು ನಿಂತ ನೆಲ ಪರೋಪಕಾರದ ಅರಿವನ್ನು ತೋರಿಸುತ್ತವೆ. ಕಲಿಕೆ ಗಳಿಕೆ ಜೊತೆಗೆ ಜೀವನದಲ್ಲಿ ಕರ್ತವ್ಯ, ಶಿಸ್ತು, ಶ್ರದ್ಧೆ, ಛಲ ಮತ್ತು ಸಮರ್ಪಣಾ ಮನೋಭಾವ ಬೆಳೆಸಿಕೊಳ್ಳಬೇಕು. ಶಾಂತಿ ನೆಮ್ಮದಿಯ ಬದುಕಿಗೆ ರೇಣುಕಾಚಾರ್ಯರು ಕೊಟ್ಟ ಕೊಡುಗೆ ಅಮರ, ಅಜರಾಮರ. ಸತ್ಯ ದರ್ಶನ ಮಾಡಿಸುವುದೇ ಗುರುವಿನ ಪರಮ ಧರ್ಮ.
ಉಸಿರಾಟಕ್ಕೆ ಗಾಳಿ ಮುಖ್ಯವಾಗಿರುವಂತೆ ಉಜ್ವಲ ಭವಿಷ್ಯಕ್ಕೆ ಗುರು ಮಾರ್ಗದರ್ಶನ ಅವಶ್ಯಕ. ಜ್ಞಾನ ವಿಜ್ಞಾನಗಳ ಸಮನ್ವಯದಿಂದ ಉನ್ನತಿ ದೊರಕಲು ಸಾಧ್ಯ. ಗುರು ಭಕ್ತಿಯ ಶಕ್ತಿ ಜೀವ ಜಗತ್ತಿಗೆ ಸಂಜೀವಿನಿ. ಗುರು ಭಕ್ತಿ ಇಲ್ಲದಾತನಿಗೆ ಶಿವ ಭಕ್ತಿ ಬರಲಾರದು. ಶಿವನ ಇನ್ನೊಂದು ಸಾಕಾರ ರೂಪವೇ ಶ್ರೀ ಗುರು ಎಂದು ಶಾಸ್ತ್ರ ಸಿದ್ಧಾಂತಗಳು ಸಾರುತ್ತಿವೆ. ಅಂಗತ್ರಯಗಳಿಗೆ ಅಂಟಿದ ಮಲತ್ರಯಗಳನ್ನು ದೂರಮಾಡಿ ಶಿವಜ್ಞಾನದ ಅರಿವನ್ನು ಮೂಡಿಸುವ ಗುರು ಶಕ್ತಿ ಸಾಮಾನ್ಯವಾದುದಲ್ಲ. ಇಷ್ಟಲಿಂಗಾರ್ಚನೆಯಿಂದ ಜೀವಾತ್ಮ ಪರಮಾತ್ಮನಲ್ಲಿ ಮುನ್ನಡೆಯಲು ವೀರಶೈವ ಧರ್ಮ ದಿಕ್ಸೂಚಿಯಾಗಿದೆ.