

ಆಂಧ್ರಪ್ರದೇಶ: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ಸ್ಯಾಂಡಲ್ವುಡ್ನ ಕಿಸ್ ಬೆಡಗಿ, ನಟಿ ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿರುವ 'ಗುಂಟೂರು ಕಾರಂ' ಇದೇ ಜ.12ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು, ರಿಲೀಸ್ ಆದ ಮೊದಲ ದಿನವೇ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಜತೆಗೆ ಕಲೆಕ್ಷನ್ನಲ್ಲಿಯೂ ಉತ್ತಮ ಆರಂಭ ದೊರಕಿದೆ. ಇದೀಗ ಮೂರನೇ ದಿನಕ್ಕೆ ಹೆಜ್ಜೆಯಿಟ್ಟಿರುವ ಚಿತ್ರ ಗಳಿಸಿದ ಒಟ್ಟು ಮೊತ್ತ ಎಷ್ಟು ಎಂಬುದರ ವಿವರ ಹೀಗಿದೆ ನೋಡಿ.
ಸುಮಾರು 200 ಕೋಟಿ ರೂ.ಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಾಣಗೊಂಡ 'ಗುಂಟೂರು ಕಾರಂ' ಬಿಡುಗಡೆಗೂ ಮೊದಲೇ ಟ್ರೇಲರ್, ಟೀಸರ್ ಮೂಲಕ ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ಭರವಸೆ ಮೂಡಿಸಿತ್ತು. ಜಾಗತಿಕವಾಗಿ ಸುಮಾರು 2000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಮಾಸ್ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಮೊದಲ ದಿನವೇ ಚಿತ್ರ ವಿಶ್ವದಾದ್ಯಂತ 94 ಕೋಟಿ ರೂ. ಗಳಿಕೆ ಕಾಣುವ ಮೂಲಕ ಸದ್ದು ಮಾಡಿದ್ದು, ಎರಡನೇ ದಿನದ ಅಂತ್ಯಕ್ಕೆ ಚಿತ್ರ 127 ಕೋಟಿ ರೂ. ಗಳಿಸಿತು. ಇದೀಗ ಮೂರನೇ ದಿನದ ಬಳಿಕ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸಖತ್ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದ್ದು, ಮೂರನೇ ದಿನಕ್ಕೆ ಚಿತ್ರವು ಭಾರತದಾದ್ಯಂತ 14 ಕೋಟಿ ರೂ. ನಿವ್ವಳ ಕಲೆಕ್ಷನ್ ಮಾಡಿದ್ದು, 20 ಕೋಟಿ ರೂ. ಗಳಿಕೆ ಕಾಣುವ ನಿರೀಕ್ಷೆಯಿದೆ.
ಈ ಚಿತ್ರ ವಿಶ್ವಾದ್ಯಂತ 23 ಕೋಟಿ ರೂ. ಕಲೆಕ್ಷನ್ ಮಾಡಲಿದೆ ಎಂದು ಟ್ರೇಡ್ ಮೂಲಗಳು ಬಹಿರಂಗಪಡಿಸಿವೆ. ಶೀಘ್ರವೇ ಚಿತ್ರ 150 ಕೋಟಿ ರೂ. ಗಳಿಕೆಯ ಮೈಲಿಗಲ್ಲು ತಲುಪಲಿದೆ ಎಂದು ಸಿನಿ ಮೂಲಗಳು ಮಾಹಿತಿ ನೀಡಿವೆ. ಚಿತ್ರದಲ್ಲಿ ಮಹೇಶ್ ಬಾಬು, ಶ್ರೀಲೀಲಾ, ಮೀನಾಕ್ಷಿ ಚೌಧರಿ, ರಮ್ಯಕೃಷ್ಣ, ಪ್ರಕಾಶ್ ರಾಜ್, ಜಗಪತಿ ಬಾಬು ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).