

ಆಂಧ್ರಪ್ರದೇಶ: ಟಾಲಿವುಡ್ ಪ್ರಿನ್ಸ್, ನಟ ಮಹೇಶ್ ಬಾಬು ಅಭಿನಯದ ಬಹುನಿರೀಕ್ಷಿತ ತೆಲುಗು ಚಿತ್ರ ಗುಂಟೂರು ಕಾರಂ ಇದೀಗ ಬಿಡುಗಡೆಗೊಂಡ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದೆ. ಪ್ಯಾನ್ ಇಂಡಿಯಾ ಸಿನಿಮಾ ಅಲ್ಲದೇ ಹೋದರೂ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಕಾಣುವ ಮುಖೇನ ಸಖತ್ ಕಿಕ್ ಸ್ಟಾರ್ಟ್ ಪಡೆದುಕೊಂಡಿದೆ.
ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಗುಂಟೂರು ಕಾರಂ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ಲಭ್ಯವಾಗುತ್ತಿದ್ದು, ಅಭಿಮಾನಿಗಳು ಮಹೇಶ್ ಬಾಬು ಅಭಿನಯಕ್ಕೆ ಫಿದಾ ಆಗಿದ್ದಾರೆ. ಚಿತ್ರದಲ್ಲಿ ಪ್ರಿನ್ಸ್ಗೆ ನಾಯಕಿಯಾಗಿ ಕಂಗೊಳಿಸಿದ ಸ್ಯಾಂಡಲ್ವುಡ್ ಬ್ಯೂಟಿ ಶ್ರೀಲೀಲಾ, ಸಿನಿಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚಿತ್ರ ತಯಾರಕರು ಮೊದಲ ದಿನದ ಸಂಗ್ರಹವನ್ನು ಇದೀಗ ಬಹಿರಂಗಪಡಿಸಿದ್ದು. ಜಾಗತಿಕವಾಗಿ ಗುಂಟೂರು ಕಾರಂ 94 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದು ಪ್ರಾದೇಶಿಕ ಚಿತ್ರಕ್ಕೆ ಸಾರ್ವಕಾಲಿಕ ದಾಖಲೆಯ ಓಪನಿಂಗ್ ಎಂದು ನಿರ್ಮಾಪಕರು ಹೇಳಿದ್ದಾರೆ. ಸದ್ಯ ಈ ಸುದ್ದಿ ಚಿತ್ರತಂಡಕ್ಕೆ ಭಾರೀ ಸಂತಸ ತಂದಿದ್ದು, ಮುಂದಿನ ದಿನಗಳಲ್ಲಿ ಸಿನಿಮಾ ಯಾವ ರೀತಿ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಚಿತ್ರದಲ್ಲಿ ಮಹೇಶ್ ಬಾಬು, ಶ್ರೀಲೀಲಾ, ಮೀನಾಕ್ಷಿ ಚೌಧರಿ, ಪ್ರಕಾಶ್ ರಾಜ್, ರಮ್ಯಾ ಕೃಷ್ಣ, ಜಗಪತಿ ಬಾಬು, ರಾವ್ ರಮೇಶ್, ರಾಹುಲ್ ರವೀಂದ್ರನ್, ವೆನ್ನೆಲ ಕಿಶೋರ್ ಮುಂತಾದವರ ತಾರಾಗಣವಿದೆ. ಹರಿಕಾ ಮತ್ತು ಹಾಸನ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಎಸ್.ರಾಧಾ ಕೃಷ್ಣ ನಿರ್ಮಾಣ ಈ ಚಿತ್ರಕ್ಕೆ ಎಸ್.ಎಸ್. ಥಮನ್ ಅವರ ಸಂಗೀತವಿದೆ,(ಏಜೆನ್ಸೀಸ್).