

ಅಹ್ಮದಾಬಾದ್: ದು ಮೇ 8 ಸಂಜೆ 7ಗಂಟೆ ಸಮಯ. ನಾನು ನನ್ನ ಮನೆಯೊಳಗೆ ಕುಳಿತು ಇಫ್ತಾರ್ಗಾಗಿ ಹಣ್ಣು ಕತ್ತರಿಸುತ್ತಿದ್ದೆ. ಮನೆಯ ಮೂಲೆಯಲ್ಲಿರುವ ಮಂಚದ ಮೇಲೆ ಕುಳಿತಿದ್ದ ನನ್ನ ಪತಿ, ಒಂದು ವರ್ಷದ ಮಗಳೊಂದಿಗೆ ಆಡುತ್ತಿದ್ದರು. ಆಗ ಏಕಾಏಕಿ ನುಗ್ಗಿದ ಪೊಲೀಸರು, ನಮ್ಮನ್ನು ಹೊರಗೆ ಎಳೆದುಕೊಂಡು ಹೋದರು. ನನ್ನ ಪತಿಯನ್ನು ಥಳಿಸಿದರು.
ನನ್ನ ಪತಿ ರಮಜಾನ್ ಉಪವಾಸದಲ್ಲಿದ್ದರು. ಒಂದು ಹನಿ ನೀರು ಕುಡಿದಿರಲಿಲ್ಲ. ಮೊದಲೇ ನಿತ್ರಾಣರಾಗಿದ್ದ ಅವರನ್ನು ಪೊಲೀಸರು ಸಿಕ್ಕಾಪಟೆ ಹೊಡೆದರು...
ಇದು ಗುಜರಾತ್ನ ಅಹ್ಮದಾಬಾದ್ನಲ್ಲಿರುವ ಶಹಪುರ ಅಡ್ಡಾದಲ್ಲಿ ನೆಲೆಸಿರುವ ರೆಹನಾ ಎಂಬ ಮಹಿಳೆ ಅಳುತ್ತ ಹೇಳಿದ ಮಾತುಗಳು..
ಮೇ 8ರಂದು ಶಹಪುರ ಅಡ್ಡಾದಲ್ಲಿ ಹಿಂಸಾಚಾರ ನಡೆದಿತ್ತು. ಅದರಲ್ಲಿ 29 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಘಟನೆ ಬಗ್ಗೆ ಅಲ್ಲಿನ ಜನರು ಬೇರೆಯದೇ ಹೇಳುತ್ತಿದ್ದಾರೆ.
ಮನೆಮನೆಗೆ ನುಗ್ಗಿ ನಮ್ಮನ್ನು ಹಿಂಸಿಸಿದ್ದಾರೆ ಎಂದು ಪೊಲೀಸರ ವಿರುದ್ಧವೇ ಆರೋಪಗಳ ಸುರಿಮಳೆ ಸುರಿಸುತ್ತಿದ್ದಾರೆ. ಬರೀ ರೆಹನಾ ಅಷ್ಟೇ ಅಲ್ಲ, ಸುಲೆಮಾ ಎಂಬ ಗರ್ಭಿಣಿ ಕೂಡ ಪೊಲೀಸರು ಕ್ರೌರ್ಯ ತೋರಿದ್ದಾರೆ. ನನ್ನನ್ನು ಬಿಟ್ಟುಬಿಡಿ, ನಾನು ಗರ್ಭಿಣಿ ಎಂದು ಕೂಗಿಕೊಳ್ಳುತ್ತಿದ್ದರೂ ನನ್ನ ಹೊಟ್ಟೆಗೆ ಕೋಲಿನಿಂದ ಸಿಕ್ಕಾಪಟೆ ಹೊಡೆದಿದ್ದಾರೆ. ಅಷ್ಟರಲ್ಲಿ ನನ್ನ ಪಕ್ಕದ ಮನೆಯವರೊಬ್ಬರು ಬಂದು, ಆ ಕೋಲನ್ನು ಪೊಲೀಸರ ಕೈಯಿಂದ ಕಿತ್ತೆಸೆದು ನನ್ನನ್ನು ಕಾಪಾಡಿದರು ಎಂದು ಸುಲೆಮಾ ಹೇಳಿದ್ದಾರೆ. ಅಷ್ಟೇ ಅಲ್ಲ, ತಮ್ಮ ಕೆನ್ನೆಯ ಮೇಲೆ ಮೂಡಿದ ಕೆಂಪು ಬಾಸುಂಡೆಯನ್ನೂ ತೋರಿಸಿದ್ದಾರೆ.
ಇನ್ನು 62 ವರ್ಷದ ವೃದ್ಧ, ಅಂಗವಿಕಲ ಮಗುವಿನ ಮೇಲೆ ಕೂಡ ಪೊಲೀಸರು ದೌರ್ಜನ್ಯ ಎಸಗಿದ್ದಾರೆಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.
ಆದರೆ ಪೊಲೀಸರು ತಮ್ಮ ಮೇಲಿನ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಅಲ್ಲಿನ ಡಿಸಿಪಿ, ಧರ್ಮೇಂದ್ರ ಶರ್ಮಾ ಮಾತನಾಡಿದ್ದು, ನಮ್ಮ ಪೊಲೀಸ್ ಸಿಬ್ಬಂದಿ ಮನೆಯೊಳಗೆ ನುಗ್ಗಿ ಮುಸ್ಲಿಂ ಮಹಿಳೆಯರು, ವೃದ್ಧರನ್ನು ಥಳಿಸಿದ್ದಾರೆಂಬುದು ಸಂಪೂರ್ಣ ಸುಳ್ಳು. ಹಿಂಸಾಚಾರಕ್ಕೆ ಕಾರಣರಾದ ಕೆಲವರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ನಾವು ಅವರನ್ನು ಹಿಡಿಯಲು ಬೆನ್ನಟ್ಟಿದ್ದೇವೆ. ಅದರಲ್ಲಿ ಕೆಲವರು, ಅಲ್ಲಿಯೇ ಇದ್ದ ಮನೆಗಳಿಗೆ ನುಗ್ಗಿ ಪಾರಾಗಲು ಪ್ರಯತ್ನ ಮಾಡಿದರು. ಆಗ ನಾವೂ ಸಹ ಅಂತಹ ಮನೆಯೊಳಗೆ ತೆರಳಿ ಆರೋಪಿಗಳನ್ನು ಹಿಡಿದಿದ್ದೇವೆ ಹೊರತು, ಉಳಿದವರನ್ನು ಥಳಿಸಿಲ್ಲ ಎಂದಿದ್ದಾರೆ.
ಆಗಿದ್ದೇನು?
ಅಹ್ಮದಾಬಾದ್ನ ಶಹಪುರದಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ವಾರ ಅಲ್ಲಿ ಲಾಕ್ಡೌನ್ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು. ಎಲ್ಲ ತರಕಾರಿ, ಹಣ್ಣುಗಳ ಅಂಗಡಿಗಳನ್ನೂ ಮುಚ್ಚಲಾಗಿತ್ತು. ಹಾಲು ಮತ್ತು ಔಷಧಿಗಳು ಮಾತ್ರ ದೊರೆಯುತ್ತಿದ್ದವು.
ಈ ಶಹಪುರದಲ್ಲಿ ಕೋಮು ಗಲಭೆ ಪದೇಪದೆ ನಡೆಯುತ್ತಿರುವುದರಿಂದ ಇದೊಂದು ಸೂಕ್ಷ್ಮ ಪ್ರದೇಶವಾಗಿದೆ. ಮೇ 8ರಂದು ಶಹಪುರದ ಕೆಲವು ಮುಸ್ಲಿಂ ಮಹಿಳೆಯರು ತಮ್ಮ ರಮಜಾನ್ ಉಪವಾಸ ಅಂತ್ಯಗೊಳಿಸಲು ಹಾಲು ತರಲೆಂದು ಅಂಗಡಿಗೆ ಹೋಗದರು. ಆಗ ಅಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ತಂಡ ಅವರನ್ನು ತಡೆದು, ಪ್ರಶ್ನೆ ಮಾಡಿದೆ. ಅಷ್ಟಕ್ಕೆ ಮಾತಿನ ಚಕಮಕಿ ಶುರುವಾಗಿ, ಸ್ಥಳದಲ್ಲಿದ್ದ ಬೇರೆ ಮುಸ್ಲಿಮರೂ ಆಗಮಿಸಿ ಪೊಲೀಸರಿಗೆ ಕಲ್ಲು ಹೊಡೆಯಲು ಪ್ರಾರಂಭಿಸಿದರು. ಅದೇ ಸಮಯದಲ್ಲಿ ಒಂದಷ್ಟು ಜನ ಬೇಕೆಂದೇ ಹಿಂಸಾಚಾರವನ್ನು ಹೆಚ್ಚಿಸಿದರು ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)