ರಾತ್ರಿ ಪಾಳಿ ಟ್ರಾಫಿಕ್ ಪೊಲೀಸರಿಗೆ ಮಾರ್ಗಸೂಚಿ

police
Published on

ಬೆಂಗಳೂರು: ರಾಜಧಾನಿಯಲ್ಲಿ ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸುವ ಸಂಚಾರ ಪೊಲೀಸರಿಗೆ 19 ಅಂಶಗಳ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ನಗರದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರ ಇರುವ ಕಾರಣಕ್ಕೆ ಅಪಘಾತಗಳು ಸಂಭವಿಸುತ್ತಿವೆ. ಈ ವೇಳೆ ಅಧಿಕಾರಿ ಮತ್ತು ಸಿಬ್ಬಂದಿ ಕೆಲ ಸೂಚನೆಗಳನ್ನು ಪಾಲಿಸುವಂತೆ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್. ಅನುಚೇತ್ ಕಟ್ಟಾಜ್ಞೆ ಮಾಡಿದ್ದಾರೆ. ಮೇಲಧಿಕಾರಿಗಳ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸುಸಜ್ಜಿತವಾದ 2 ಬೈಕ್‌ಗಳನ್ನು ಲಭ್ಯವಿರುವಂತೆ ಠಾಣಾಧಿಕಾರಿಗಳು ನೋಡಿಕೊಳ್ಳಬೇಕು. ಮಹಿಳೆಯರಿದ್ದ ವಾಹನಗಳ ಅಪಘಾತ ಸಂಬಂಧ ದೂರು ಬಂದರೆ ಕೂಡಲೇ ಸ್ಪಂದಿಸಿ ಮಹಿಳಾ ಸಿಬ್ಬಂದಿ ಜತೆ ಸ್ಥಳಕ್ಕೆ ತೆರಳಿ ಅಗತ್ಯ ತೆಗೆದುಕೊಳ್ಳಬೇಕು. ಹಿರಿಯ ನಾಗರೀಕರು, ಮಕ್ಕಳು, ಮಹಿಳೆಯರು ಅಪಘಾತಕ್ಕೆ ಒಳಗಾಗಿದ್ದರೆ ತುರ್ತಾಗಿ ಸ್ಪಂದಿಸಿ ಅಥವಾ ಸಣ್ಣ ಪ್ರಮಾಣದಲ್ಲಿ ಗಾಯಗೊಂಡಿದ್ದರೆ ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಡಬೇಕು ಎಂದು ಸೂಚನೆ ನೀಡಿದ್ದಾರೆ.

ಗಣ್ಯವ್ಯಕ್ತಿಗಳ ಸಂಚಾರಕ್ಕೆ ತೊಂದರೆ ಆಗದ ರೀತಿಯಲ್ಲಿ ಅನುವು ಮಾಡಿಕೊಡಬೇಕು. ಅಂಬುಲೆನ್ಸ್, ಆಗ್ನಿಶಾಮಕ ದಳ ವಾಹನಗಳು ಸಾಗುವ ಮಾರ್ಗದಲ್ಲಿ ಅದ್ಯತೆ ನೀಡಬೇಕು. ರಾತ್ರಿ ಹಾಗೂ ನಸುಕಿನ ವೇಳೆ ವ್ಹೀಲಿಂಗ್ ಮಾಡುವ ಸ್ಥಳಗಳನ್ನು ಗುರುತಿಸಿ ನಿಗಾವಹಿಸಬೇಕು ಎಂದು ತಾಕೀತು ಮಾಡಿದ್ದಾರೆ.

ಅಧಿಕಾರಿಗಳು ಠಾಣಾ ಸರಹದ್ದಿನಲ್ಲಿರುವ ಸಿಗ್ನಲ್ ಲೈಟ್ಸ್, ಪೆಲಿಕಾನ್ ಸಿಗ್ನಲ್, ಸಿಸಿ ಕ್ಯಾಮರಾ ಹಾಗೂ ಸರ್ಕಾರಿ ಸ್ವತ್ತುಗಳ ಬಗ್ಗೆ ಗಸ್ತು ವೇಳೆ ನಿಗಾವಹಿಸುವುದು ಹಾಗೂ ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು, ಇತರೆ ಮನೋರಂಜನಾ ಸ್ಥಳಗಳಲ್ಲಿ ಸಂಚಾರದಟ್ಟಣೆ ಉಂಟಾಗದಂತೆ ಕ್ರಮ ವಹಿಸಬೇಕು. ಪ್ರಮುಖ ಜಂಕ್ಷನ್‌ಗಳಲ್ಲಿ ರಿಪ್ಲೆಕ್ಟಿವ್ ಜಾಕೇಟ್‌ಗಳನ್ನು ಕಡ್ಡಾಯವಾಗಿ ಧರಿಸಿಕೊಂಡು ಕಾಣುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ಪೊಲೀಸರಿಗೆ ಆದೇಶಿಸಿದ್ದಾರೆ.

ರಾತ್ರಿ ವೇಳೆ ಕಾರ್ಯಕ್ರಮಗಳು ಇವೆಯೇ? ಆ ಕಾರ್ಯಕ್ರಮಕ್ಕೆ ಯಾರಾದರೂ ವಿಐಪಿ/ ವಿವಿಐಪಿ ಹಾಗೂ ಹಿರಿಯ ಅಧಿಕಾರಿಗಳು ಬರುತ್ತಿದ್ದಾರೆಯೇ? ಯಾವ ಮಾರ್ಗದಲ್ಲಿ ಬರುತ್ತಿದ್ದಾರೆ? ಎಷ್ಟು ಜನ ಸೇರುತ್ತಾರೆ? ಟ್ರಾಫಿಕ್ ಜಾಮ್ ಉಂಟಾಗದಂತೆ ಪರ್ಯಾಯ ಮಾರ್ಗಗಳು ಇವೆಯೇ ಎಂಬುದನ್ನು ತಿಳಿದು ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರು ನೀಡುವ ಸೂಚನೆಗಳನ್ನು ಪಾಲಿಸಬೇಕು. ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ದೂರುಗಳು ಮಹಿಳೆಯಿರಿಂದ ಬಂದಲ್ಲಿ ವಿಳಂಬ ಮಾಡದೆ ಸಂಬಂಧಪಟ್ಟ ಠಾಣೆಗಳಿಗೆ ರವಾನಿಸಿ, ಸೂಕ್ತ ಕ್ರಮ ಕೈಗೊಂಡು ದೂರುದಾರರಿಗೆ ಮಾಹಿತಿಯನ್ನು ನೀಡುವುದು. ಅಗತ್ಯ ಇದ್ದಲ್ಲಿ ಅವರೊಂದಿಗೆ ಕಾನೂನು ಮತ್ತು ಸುವ್ಯವಸ್ಥೆ ಠಾಣೆಗೆ ತೆರಳಿ ಸಹಾಯ ಮಾಡಬೇಕೆಂದು ರಾತ್ರಿಪಾಳಿ ಅಧಿಕಾರಿ, ಸಿಬ್ಬಂದಿಗೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net