

ಹೊಸನಗರ: ರಾಜ್ಯ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಕ್ರಾಂತಿಕಾರಕವಾಗಿದ್ದು, ಯಾವ ಕಾರಣಕ್ಕೂ ಯೋಜನೆ ಸ್ಥಗಿತಗೊಳ್ಳುವುದಿಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ತಾಪಂ ಕಚೇರಿ ಆವರಣದಲ್ಲಿ ಮಂಗಳವಾರ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಗ್ಯಾರಂಟಿ ಯೋಜನೆಗಳು ಸಕಾಲದಲ್ಲಿ ಫಲಾನುಭವಿಗಳಿಗೆ ತಲುಪುತ್ತಿವೆ. ವಿಪಕ್ಷಗಳ ಟೀಕೆ ರಾಜಕೀಯದಿಂದ ಕೂಡಿದೆ. ಯೋಜನೆ ಎಲ್ಲ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ವಂಚಿತರಾದಲ್ಲಿ ಅದರ ಕಾರಣ ಹುಡುಕಿ ಯೋಜನೆ ತಲುಪಿಸುವುದೇ ನೂತನ ಸಮಿತಿ ಉದ್ದೇಶ ಎಂದರು.
ಹೊಸನಗರ ತಾಲೂಕಿನಲ್ಲಿ ಮಾರುತಿಪುರ ಚಿದಂಬರ್ ಅಧ್ಯಕ್ಷತೆಯಲ್ಲಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಫಲಾನುಭವಿಗಳು ಕಚೇರಿಯಿಂದ ಅಗತ್ಯ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು. ತಹಸೀಲ್ದಾರ್ ರಶ್ಮಿ ಹಾಲೇಶ್, ತಾಪಂ ಇಒ ನರೇಂದ್ರಕುಮಾರ್, ಪ್ರಮುಖರಾದ ಚಂದ್ರಮೌಳಿ, ಬಿ.ಪಿ.ರಾಮಚಂದ್ರ, ರಾಧಿಕಾ ಶ್ರೇಷ್ಠಿ, ಗ್ಯಾರಂಟಿ ಅನುಷ್ಠಾನ ಅಧಿಕಾರಿಗಳು, ಸಮಿತಿ ಸದಸ್ಯರು ಇದ್ದರು.