ಗ್ಯಾರಂಟಿ ಪರಿಣಾಮವೇ ಹೆಚ್ಚುವರಿ ತೆರಿಗೆ

byr (4)
ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ಬಿಜೆಪಿ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಲೋಕಸಭಾ ಚುಣಾವಣೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿದರು. ಬಿ.ಸ್ವಾಮಿರಾವ್, ರಾಜು ತಲ್ಲೂರ್, ಹೆದ್ದೂರು ನವೀನ್ ಇತರರಿದ್ದರು.
Published on

ತೀರ್ಥಹಳ್ಳಿ: ರಾಜ್ಯದಲ್ಲಿ ಸುಳ್ಳು ಘೋಷಣೆಗಳ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕೇಂದ್ರ ಸರ್ಕಾರ ಕೊಡುವ ಅಕ್ಕಿಯನ್ನು ಜನರಿಗೆ ಹಂಚಿ, ಛಾಪಾ ಕಾಗದ ಬೆಲೆ ಏರಿಕೆ ಮತ್ತಿತರ ವಸ್ತುಗಳ ಮೇಲೆ ಹೆಚ್ಚುವರಿ ತೆರಿಗೆ ಹಾಕಿ ಇನ್ನೊಂದು ಕಡೆಯಿಂದ ಜನರನ್ನು ಲೂಟಿ ಮಾಡುತ್ತಿದೆ ಎಂದು ಲೋಕಸಭಾ ಚುಣಾವಣೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ದೂರಿದರು.

ಪಟ್ಟಣದ ವಿದ್ಯಾರಾಜ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿ, ಕೃಷಿ ಸಮ್ಮಾನ್ ಯೋಜನೆಯಲ್ಲಿ 27 ಲಕ್ಷ ರೈತರಿಗೆ 680 ಕೋಟಿ ರೂ. ಹಣ ನೀಡದೆ ವಂಚಿಸಿದೆ. ಆಯುಷ್ಮಾನ್ ಕಾರ್ಡ್ ಯೋಜನೆಯಲ್ಲಿ 2018ರಿಂದ ಈವರೆಗೆ ಜಿಲ್ಲೆಯಲ್ಲಿ 2.61 ಲಕ್ಷ ಲಾನುಭವಿಗಳಿಗೆ 260 ಕೋಟಿ ರೂ. ಸೌಲಭ್ಯ ದೊರೆತಿದೆ ಎಂದು ವಿವರಿಸಿದರು.
ಉದ್ಯಮ, ಪ್ರವಾಸ, ಶೈಕ್ಷಣಿಕ ಆರೋಗ್ಯ ಮತ್ತು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿ ಕರಾವಳಿ-ಮಲೆನಾಡನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-169ಎ ಅಭಿವೃದ್ಧಿಪಡಿಸಲಾಗುವುದು. ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ ಆಗುಂಬೆ ಘಾಟ್‌ನಲ್ಲಿ 3000 ಕೋಟಿ ರೂ. ವೆಚ್ಚದಲ್ಲಿ 12 ಕಿ.ಮೀ. ಸುರಂಗ ಮಾರ್ಗ ನಿರ್ಮಿಸಲು ಕೇಂದ್ರ ಸರ್ಕಾರದ ಅನುಮತಿ ದೊರೆತಿದ್ದು, ಡಿಪಿಆರ್ ಕೂಡಾ ಸಿದ್ಧವಾಗಿದೆ. ಈ ಯೋಜನೆಗೆ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದರು.
10 ವರ್ಷಗಳ ನನ್ನ ಅಧಿಕಾರ ಅವಧಿಯಲ್ಲಿ ತೀರ್ಥಹಳ್ಳಿ ಮತ್ತು ಶಿವಮೊಗ್ಗ ಕ್ಷೇತ್ರಗಳಿಗೆ ಅನುಕೂಲ ಆಗುವಂತೆ ವಿಮಾನ ನಿಲ್ದಾಣ, ರೈಲ್ವೆ, ರಾಷ್ಟ್ರೀಯ ಹೆದ್ದಾರಿಗಳು, ಸೇತುವೆಗಳು ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ತಂದಿದ್ದೇನೆ. ಸಂಸದನಾಗಿ ಚುನಾಯಿತನಾಗಿದ್ದರೂ ಓರ್ವ ಗ್ರಾಪಂ ಸದಸ್ಯನಂತೆ ಜನರೊಂದಿಗೆ ಬೆರೆತು ಕಾರ್ಯನಿರ್ವಹಿಸಿದ ತೃಪ್ತಿ ಇದೆ. ಪೂರ್ವಜನ್ಮದ ಪುಣ್ಯದಿಂದ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸುವ ಅವಕಾಶ ಪಡೆದಿರುವ ನಾವು ಪರಿಸರಕ್ಕೆ ಧಕ್ಕೆ ಆಗದಂತೆ ಅಭಿವೃದ್ಧಿ ಸಾಧಿಸಬೇಕಿದೆ ಎಂದು ಹೇಳಿದರು.
ಆರ್ಟಿಕಲ್ 370 ಅನ್ನು ಕಿತ್ತೊಗೆಯುವ ಮೂಲಕ ದೇಶದ ಏಕತೆಯನ್ನು ಎತ್ತಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಸೂಪರ್ ಪವರ್ ಆಗಿ ರೂಪಿಸಲು ಶ್ರಮಿಸುತ್ತಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ಉದ್ಯಮ, ಕೃಷಿ ಮುಂತಾದ ಕ್ಷೇತ್ರಗಳನ್ನು ಸಶಕ್ತಗೊಳಿಸುವ ಮೂಲಕ ದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತದ 95 ಕೋಟಿ ಮತದಾರರು 10 ಲಕ್ಷ ಮತಗಟ್ಟೆಗಳಲ್ಲಿ ಮುಕ್ತವಾಗಿ ತಮ್ಮ ಹಕ್ಕನ್ನು ಚಲಾಯಿಸುವ ಸಂಭ್ರಮವನ್ನು ವಿದೇಶಿಗರು ಗಮನಿಸುತ್ತಿದ್ದಾರೆ ಎಂದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಬಿಜೆಪಿಗೆ ಸತತವಾಗಿ ಬೆಂಬಲ ದೊರೆಯುತ್ತಿರುವ ಈ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ 30 ಸಾವಿರ ಮತಗಳ ಲೀಡ್ ಬಂದಿದೆ. ಈ ಬಾರಿ ಇನ್ನೂ ಹೆಚ್ಚು ಮತಗಳನ್ನು ಸೆಳೆಯಲು ಕಾರ್ಯಕರ್ತರು ಕೆಲಸ ಮಾಡಬೇಕಿದೆ. ದೇಶದ ಭವಿಷ್ಯ ನಿರ್ಮಿಸುವ ನಿಟ್ಟಿನಲ್ಲಿ ಈ ಚುನಾವಣೆ ನಿರ್ಣಾಯಕ. ಜಗತ್ತು ಮೆಚ್ಚಿರುವ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗುವುದು ಖಚಿತ. ಇದನ್ನು ತಡೆಯಲು ಯಾರಿಂದಲೂ ಅಸಾಧ್ಯ ಎಂದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ಮಾಜಿ ಶಾಸಕ ಬಿ.ಸ್ವಾಮಿರಾವ್, ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಪ್ರಮುಖರಾದ ಎಸ್.ದತ್ತಾತ್ರಿ, ಬೇಗುವಳ್ಳಿ ಸತೀಶ್, ರಾಜು ತಲ್ಲೂರ್, ಮೇಧೋಳಿಗೆ ರಾಮಸ್ವಾಮಿ, ರಾಘವೇಂದ್ರ ನಾಯಕ್, ಬೇಗುವಳ್ಳಿ ಕವಿರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net