

ನವದೆಹಲಿ: ಜಿಎಸ್ಟಿ ನಕಲಿ ನೋಂದಣಿ ವಿರುದ್ಧ ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್್ಸ ಮಂಡಳಿ (ಸಿಬಿಐಸಿ) ದೇಶಾದ್ಯಂತ ಆರಂಭಿಸಿರುವ ಕಾರ್ಯಾಚರಣೆಗೆ ಭರ್ಜರಿ ಯಶಸ್ಸು ಸಿಕ್ಕಿದ್ದು, ದಿನೇ ದಿನೆ ಭಾರಿ ಪ್ರಮಾಣದ ವಂಚನೆ ಪತ್ತೆ ಆಗುತ್ತಿದೆ. ಈವರೆಗೆ 10,700 ನಕಲಿ ಕಂಪನಿಗಳನ್ನು ಪತ್ತೆ ಹಚ್ಚಲಾಗಿದ್ದು, ಒಟ್ಟು 10,179 ಕೋಟಿ ರೂ. ವಂಚನೆ ಬೆಳಕಿಗೆ ಬಂದಿದೆ. ಜಿಎಸ್ಟಿ ನಕಲಿ ನೋಂದಣಿ ವಿರುದ್ಧ ಹಮ್ಮಿಕೊಂಡಿರುವ ಈ ಎರಡನೇ ಹಂತದ ವಿಶೇಷ ಕಾರ್ಯಾಚರಣೆ ಅಕ್ಟೋಬರ್ 15ರವರೆಗೆ ಮುಂದುವರಿಯಲಿದೆ.
ದೇಶದಲ್ಲಿ ಮೊದಲ ಹಂತದಲ್ಲಿ 2023ರ ಮೇ 16ರಿಂದ ಜುಲೈ 15ರವರೆಗೆ ನಕಲಿ ನೋಂದಣಿಯ ವಿರುದ್ಧ ಕಾರ್ಯಾಚರಣೆ ನಡೆದಿತ್ತು. 21,791 ನಕಲಿ ಕಂಪನಿಗಳನ್ನು ಪತ್ತೆ ಹಚ್ಚಿದ್ದ ಅಧಿಕಾರಿಗಳು 24,010 ಕೋಟಿ ರೂ. ವಂಚನೆಯನ್ನು ಬಯಲಿಗೆ ಎಳೆದಿದ್ದರು.
ದೇಶದಲ್ಲಿ ಹೊಸ ವ್ಯವಸ್ಥೆ: ‘ಈಗಾಗಲೇ ದೇಶದ 12 ರಾಜ್ಯಗಳಲ್ಲಿ ಆಧಾರ್ ಸಂಖ್ಯೆ ಆಧಾರಿತ ಜಿಎಸ್ಟಿ ನೋಂದಣಿ ದೃಢೀಕರಣ ಪ್ರಕ್ರಿಯೆ ಜಾರಿಯಲ್ಲಿದೆ. ಅಕ್ಟೋಬರ್ 4ರಿಂದ ಇನ್ನೂ 4 ರಾಜ್ಯಗಳಲ್ಲಿ ಆರಂಭವಾಗಲಿದೆ. ಅಂತಿಮವಾಗಿ ದೇಶದ 20 ರಾಜ್ಯಗಳಲ್ಲಿ ಈ ಪ್ರಕ್ರಿಯೆ ಜಾರಿಗೆ ಬರಲಿದೆ’ ಎಂದು ಸಿಬಿಐಸಿ ಸದಸ್ಯ ಶಶಾಂಕ್ ಪ್ರಿಯಾ ಹೇಳಿದ್ದಾರೆ.
ತೆರಿಗೆ ವಂಚನೆ ಎಸಗುವ ವರ್ತಕರಿಗೆ ಇಲಾಖೆಯು ಕೆಲ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಇದೆ. ತೆರಿಗೆ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಇದಕ್ಕೆ ಕಡಿವಾಣ ಹಾಕಲು ಕಸ್ಟಮ್್ಸ ಮಂಡಳಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಶಶಾಂಕ್ ತಿಳಿಸಿದ್ದಾರೆ.ಸರಕು ಮತ್ತು ಸೇವಾ ತೆರಿಗೆಯ ಅಡಿ ವರ್ತಕರಿಗೆ ಗುರುತಿನ ಸಂಖ್ಯೆ (ಜಿಎಸ್ಟಿಐಎನ್) ನೀಡಲಾಗುತ್ತದೆ. ಒಟ್ಟು 67,970 ಜಿಎಸ್ಟಿಐಎನ್ಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಇಲ್ಲಿಯವರೆಗೆ 39,965 ಜಿಎಸ್ಟಿಐಎನ್ಗಳ ಪರಿಶೀಲನೆ ಪೂರ್ಣಗೊಂಡಿದೆ ಎಂದಿದ್ದಾರೆ.
ಅಲ್ಲದೆ, ನಕಲಿ ಇನ್ವಾಯ್್ಸ ಸಲ್ಲಿಸಿ ಪಡೆದಿದ್ದ 2994 ಕೋಟಿ ರೂ. ಮೊತ್ತವನ್ನು ಪತ್ತೆ ಹಚ್ಚಲಾಗಿದ್ದು, ಈ ಪೈಕಿ 28 ಕೋಟಿ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.