

ಮುಂಬೈ: ಸರಕು ಮತ್ತು ಸೇವಾ ತೆರಿಗೆ (ಗೂಡ್ಸ್ ಆಂಡ್ ಸರ್ವಿಸ್ ಟ್ಯಾಕ್ಸ್ - ಜಿಎಸ್ಟಿ) ದರಗಳು ಮತ್ತು ಸ್ತರಗಳನ್ನು (ಸ್ಲ್ಯಾಬ್) ತರ್ಕಬದ್ಧಗೊಳಿಸುವ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಜಿಎಸ್ಟಿ ದರಗಳು ಇನ್ನಷ್ಟು ಕಡಿಮೆಯಾಗಲಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ.
ಆಂಗ್ಲ ಪತ್ರಿಕೆಯೊಂದರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ, ‘ಜಿಎಸ್ಟಿ ತರ್ಕಬದ್ಧಗೊಳಿಸುವುದಕ್ಕೆ 2021ರಲ್ಲಿ ರಚಿಸಲಾಗಿದ್ದ 6 ರಾಜ್ಯಗಳ ಹಣಕಾಸು ಸಚಿವರ ಸಮಿತಿ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಆದರೂ ಈಗ ನಾನು ಅದನ್ನು ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸುತ್ತಿದ್ದೇನೆ. ಸ್ವಲ್ಪ ಕೆಲಸ ಬಾಕಿ ಇದೆ. ಮುಂದಿನ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಮಂಡಿಸುತ್ತೇನೆ. ಬಹುಶಃ ಅಲ್ಲಿ ಅದು ಅಂತಿಮಗೊಳ್ಳುತ್ತದೆ. ಸ್ಲ್ಯಾಬ್ಗಳ ಸಂಖ್ಯೆ, ದರಗಳ ಇಳಿಕೆ ಮುಂತಾದ ವಿಷಯಗಳು ಆ ಸಭೆಯಲ್ಲಿ ತಾರ್ಕಿಕ ಅಂತ್ಯ ಕಾಣಲಿವೆ’ ಎಂದು ಹೇಳಿದರು.
‘2017ರ ಜುಲೈ 1ರಂದು ಜಿಎಸ್ಟಿ ವ್ಯವಸ್ಥೆಯನ್ನು ಆರಂಭಿಸುವಾಗ ಆದಾಯ ತಟಸ್ಥ ದರ (ರೆವೆನ್ಯೂ ನ್ಯೂಟ್ರಲ್ ರೇಟ್- ಆರ್ಎನ್ಆರ್) ಶೇ. 15.8ರಷ್ಟಿತ್ತು. 2023ರಲ್ಲಿ ಶೇ. 11.4ಕ್ಕೆ ಇಳಿದಿರುವ ಅದು ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಲಿದೆ’ ಎಂದು ಸಚಿವೆ ವಿವರಿಸಿದರು. ಅಮೆರಿಕ ಜತೆ ವ್ಯಾಪಾರ: ಪಾರಸ್ಪರಿಕ ತೆರಿಗೆ ವಿಧಿಸಲು ಮುಂದಾಗಿರುವ ಅಮೆರಿಕದೊಂದಿಗೆ ಉತ್ತಮ ವ್ಯಾಪಾರ ಒಪ್ಪಂದ ಮಾಡಿಕೊಂಡು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಪೂರೈಕೆ ಸರಪಳಿಯನ್ನು ಸುಗಮಗೊಳಿಸಲು ಭಾರತ ಬಯಸಿದೆ ಎಂದು ಸಚಿವೆ ನಿರ್ಮಲಾ ಹೇಳಿದರು.
ಜಾಗತಿಕ ತೆರಿಗೆ ಸಮರದ ಮಧ್ಯೆ ಭಾರತ ಜಾಣತನದಿಂದ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅಮೆರಿಕದ ಹೆಚ್ಚಿನ ತೆರಿಗೆಯಿಂದ ತೊಂದರೆಗೆ ಒಳಗಾದ ದೇಶಗಳು ತಮ್ಮ ಉತ್ಪನ್ನಗಳನ್ನು ಭಾರತಕ್ಕೆ ತಂದು ಸುರಿಯುವ ಅಪಾಯ ಇದೆ. ಸ್ಥಳೀಯ ಉದ್ಯಮಗಳ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕಾದ ಸವಾಲು ನಮ್ಮ ಮುಂದಿದೆ ಎಂದರು.
‘ಎಲ್ಲರೂ ದೇಶದ ಆರ್ಥಿಕ ಬೆಳವಣಿಗೆ ದರಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ವಿಕಸಿತ ಭಾರತ ಗುರಿಯನ್ನು ತಲುಪಲು ಇತರ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಇರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತ - ಅಮೆರಿಕ ಎರಡೂ ಉತ್ತಮ ಒಪ್ಪಂದಕ್ಕೆ ಮುಂದಾಗಬೇಕಾಗುತ್ತದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ರಫ್ತು ಹೆಚ್ಚಿಸುವ ಅವಶ್ಯಕತೆ ಇದೆ’ ಎಂದು ವಿವರಿಸಿದರು.