

ಬೆಂಗಳೂರು: ಸರಕು ಸೇವಾ ತೆರಿಗೆ (ಜಿಎಸ್ಟಿ) ಪರಿಹಾರ ನೀಡುವ ಅವಧಿ ವಿಸ್ತರಿಸುವ ನಿರೀಕ್ಷೆಯಿದ್ದು, ರಾಜ್ಯ ಸರ್ಕಾರದ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಲಿದೆ ಎಂಬ ವಿಶ್ವಾಸವನ್ನು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವ್ಯಕ್ತಪಡಿಸಿದರು. ಪ್ರಸಕ್ತ ಆರ್ಥಿಕ ವರ್ಷ (2021-22)ದ ಪೂರಕ ಅಂದಾಜುಗಳ ಧನವಿನಿಯೋಗ ವಿಧೇಯಕಕ್ಕೆ ವಿಧಾನ ಪರಿಷತ್ ಶುಕ್ರವಾರ ಅಸ್ತು ಎಂದಿತು. ಇದಕ್ಕೂ ಮುನ್ನ ಮುಖ್ಯಮಂತ್ರಿ ಪರವಾಗಿ ಮಂಡಿಸಿದ ಈ ಮಸೂದೆ ಮೇಲೆ ನಡೆದ ಚರ್ಚೆಗೆ ಜೆ.ಸಿ.ಮಾಧುಸ್ವಾಮಿ ಉತ್ತರಿಸಿ, ಜಿಎಸ್ಟಿ ಪರಿಹಾರ ಅವಧಿ 2022ರ ಜೂನ್ಗೆ ಮುಗಿಯಲಿದ್ದು, ಮತ್ತೆ ಮೂರು ವರ್ಷ ವಿಸ್ತರಿಸಬೇಕು ಎಂದು ಜಿಎಸ್ಟಿ ಮಂಡಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿರುವುದನ್ನು ಸದನದ ಗಮನಕ್ಕೆ ತಂದರು.
ಸರಾಸರಿ ಶೇ.10 ಹೆಚ್ಚಳ: ಕರೊನಾ ವ್ಯತಿರಿಕ್ತ ಪರಿಣಾಮ ಮುಂದುವರಿಯಲಿದೆ ಎಂಬ ಲೆಕ್ಕಾಚಾರದಲ್ಲಿ ಈ ಬಾರಿ ಬಜೆಟ್ನಲ್ಲಿ ಆದಾಯ ಸಂಗ್ರಹಣೆ ಗುರಿ, ಪ್ರಮಾಣವನ್ನು ಸೀಮಿತಗೊಳಿಸಲಾಗಿತ್ತು. ಆದರೆ ಸೆಪ್ಟೆಂಬರ್ ಬಳಿಕ ಚೇತರಿಕೆ ಲಕ್ಷಣ ಗೋಚರಿಸಿದ್ದರಿಂದ ಎರಡನೇ ಪೂರಕ ಅಂದಾಜಿನಲ್ಲಿ 4,000 ಕೋಟಿ ರೂ. ಹೆಚ್ಚುವರಿ ವೆಚ್ಚ ಮಾಡಲಾಗಿತ್ತು. ತೆರಿಗೆ ಸೋರಿಕೆ, ಸಂಗ್ರಹಣೆ ದಕ್ಷತೆ ವಿಚಾರದಲ್ಲಿ ಸಿಎಂ ಬೊಮ್ಮಾಯಿ ಸಲಹೆ-ಸೂಚನೆಗಳು, ಆರ್ಥಿಕ ಇಲಾಖೆ ಕ್ರಮ, ವಿವಿಧ ಇಲಾಖೆಗಳ ಶ್ರಮದಿಂದ ಫೆಬ್ರವರಿ ಅಂತ್ಯದ ವೇಳೆಗೆ ನಿರೀಕ್ಷೆ ಮೀರಿ ಆದಾಯ ಸಂಗ್ರಹಣೆ ನಿಚ್ಚಳವಾಯಿತು. ವಾಣಿಜ್ಯ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಮೂಲದಿಂದ ಹೆಚ್ಚುವರಿ 7,000 ಕೋಟಿ ರೂ. ಆದಾಯ ಸಂಗ್ರಹವಾಗಿದ್ದರೆ, ಕೇಂದ್ರ ಸರ್ಕಾರದ ಜಿಎಸ್ಟಿ ಪರಿಹಾರ, ಅನುದಾನಿತ ಯೋಜನೆಗಳ ನೆರವು ಸೇರಿ ಒಟ್ಟು 27,000 ಕೋಟಿ ರೂ. ಆದಾಯ ಏರಿಕೆಯಾಗಿದೆ ಎಂದು ಮಾಧುಸ್ವಾಮಿ ವಿವರಿಸಿದರು. ಹೆಚ್ಚುವರಿ ಆದಾಯದಲ್ಲಿ ಇಂಧನ- 5,000 ಕೋಟಿ ರೂ., ಕಂದಾಯ- 4,000 ಕೋಟಿ ರೂ., ಜಲ ಸಂಪನ್ಮೂಲ- 1,500 ಕೋಟಿ ರೂ. ಒಳಗೊಂಡು ಅಗತ್ಯತೆಗೆ ತಕ್ಕಂತೆ, ಚಾಲ್ತಿ ಯೋಜನೆ ಮತ್ತು ಕಾರ್ಯಕ್ರಮಗಳ ಬಲ ನೀಡುವುದಕ್ಕೆ ವಿನಿಯೋಗಿಸಲಾಗಿದೆ ಎಂದು ಸಮರ್ಥಿಸಿಕೊಂಡರು. ಅಲ್ಲದೆ ಸರ್ಕಾರದ ಈ ಪ್ರಯತ್ನಕ್ಕೆ ಕೆಳಮನೆ ಶ್ಲಾಘಿಸಿದ್ದು, ಮೇಲ್ಮನೆಯೂ ಇದೇ ರೀತಿ ಮೆಚ್ಚುಗೆ ವ್ಯಕ್ತಪಡಿಸಿ, ಅನುಮೋದನೆ ನೀಡಬೇಕು ಎಂದಾಗ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಬೆಂಬಲಿಸಿದರು. ಈ ವಿಷಯದ ಚರ್ಚೆಯಲ್ಲಿ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ನ ಪ್ರಕಾಶ್ ರಾಥೋಡ್, ಪಿ.ಆರ್.ರಮೇಶ್, ನಜೀರ್ ಅಹ್ಮದ್, ಜೆಡಿಎಸ್ನ ಕೆ.ಎ.ತಿಪ್ಪೇಸ್ವಾಮಿ, ಮರಿತಿಬ್ಬೇಗೌಡ ಭಾಗವಹಿಸಿದ್ದರು.
ಸಮಜಾಯಿಷಿ: ಉಚಿತ ವಿದ್ಯುತ್ ಪೂರೈಕೆಗೆ ಸಬ್ಸಿಡಿ ವೆಚ್ಚವನ್ನು ಸರ್ಕಾರವೇಭರಿಸಬೇಕಾಗಿದೆ. ಯೋಜನೆಗಳ ಅನುಷ್ಠಾನಕ್ಕೆ ಇಲಾಖೆ ತೆಗೆದುಕೊಂಡ ಸಾಲದ ಮೊತ್ತದಲ್ಲಿ 7,200 ಕೋಟಿ ರೂ. ಕಂತು ಪಾವತಿ ಮಾಡಬೇಕಾಗಿದೆ. ಈ ಕಾರಣಕ್ಕೆ ಪೂರಕ ಅಂದಾಜಿನಲ್ಲಿ ಇಂಧನ ಇಲಾಖೆಗೆ 5,000 ಕೋಟಿ ರೂ. ನೀಡಲಾಗಿದೆ ಮಾಧುಸ್ವಾಮಿ ಸಮಜಾಯಿಷಿ ನೀಡಿದರು. ಧನವಿನಿಯೋಗ ಮಸೂದೆಯನ್ನು ಹಣಕಾಸು ಹೊಣೆ ಹೊತ್ತ ಮುಖ್ಯಮಂತ್ರಿಯೇ ಮಂಡಿಸಬೇಕು. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಸಾಧ್ಯವಾಗದು ಎನ್ನುವುದನ್ನು ಒಪ್ಪಬಹುದು. ಆದರೆ ಪೂರ್ವ ನಿಗದಿ ಬದಲು ಪೂರಕ ಕಾರ್ಯಸೂಚಿಯಲ್ಲಿ ಸೇರಿಸುವುದು ಕೆಟ್ಟ ಸಂಪ್ರದಾಯವೆಂದು ಇದೇ ಸಂದರ್ಭದಲ್ಲಿ ಪ್ರತಿಪಕ್ಷಗಳು ಟೀಕಿಸಿದವು.
ಭ್ರಷ್ಟಾಚಾರ ವಿರುದ್ಧ ಗದಾಪ್ರಹಾರ ನಿರಂತರ: ಭ್ರಷ್ಟಾಚಾರದ ಬುಡಕ್ಕೆ ಕೈಹಾಕಿದ್ದೇವೆ. ಅದರ ವಿರುದ್ಧ ಗದಾಪ್ರಹಾರ ಸಾರಿದ್ದು, ಮಟ್ಟಹಾಕುವ ತನಕ ಮುಂದುವರಿಯಲಿದೆ. ಈ ವಿಷಯದಲ್ಲಿ ಪ್ರತಿಪಕ್ಷಗಳ ಸಹಕಾರವೂ ಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ವಿಧಾನಸಭೆಯಲ್ಲಿ ಪೂರಕ ಅಂದಾಜುಗಳ ಮೇಲೆ ಗುರುವಾರ ನಡೆದ ಚರ್ಚೆಗೆ ಉತ್ತರಿಸಿ, ಯಾರೂ ಮುಟ್ಟುವುದಕ್ಕೆ ಆಗುವುದಿಲ್ಲ ಎನ್ನುತ್ತಿದ್ದ ವ್ಯಕ್ತಿ, ಸಂಸ್ಥೆಗಳಿಗೆ ಕೈಹಾಕಿದ್ದೇವೆ. ತಳಹಂತದಿಂದ ಭ್ರಷ್ಟಾಚಾರ ಕಿತ್ತೊಗೆಯಲು ಸರ್ಕಾರ ಬದ್ಧವಾಗಿದೆ. ಕರ್ನಾಟಕದ ಆಸ್ತಿ, ಹಣಕಾಸು ದುರ್ಬಳಕೆಯನ್ನು ಸಹಿಸುವುದಿಲ್ಲ. ನೀವು (ಜೆಡಿಎಸ್ನ ಎ.ಟಿ.ರಾಮಸ್ವಾಮಿ) ಒಂದು ಪ್ರಕರಣದ ಬಗ್ಗೆ ಮಾಹಿತಿ ನೀಡಿದರೆ ಆ ಪ್ರಕರಣವನ್ನು ಜಾಲಾಡುತ್ತಿದ್ದು, ಎಲ್ಲಿ, ಯಾವ ಹಂತದವರೆಗೆ ವ್ಯಾಪಿಸಿದೆ ಎನ್ನುವುದು ಕ್ರಮೇಣ ಗೊತ್ತಾಗುತ್ತಿದೆ. ಭ್ರಷ್ಟಾಚಾರವನ್ನು ಬುಡಸಹಿತ ಕಿತ್ತೊಗೆಯುವ ತನಕ ಗದಾಪ್ರಹಾರ ಮುಂದುವರಿಯಲಿದೆ ಎಂದರು.
ಗಾರ್ಬೆಜ್ ಲೋಡರ್, ಕ್ಲೀನರ್ ನೇಮಕಕ್ಕೆ ಕ್ರಮ: ಪೌರಾಡಳಿತ ಇಲಾಖೆಯಲ್ಲಿ 1443 ಗಾರ್ಬೆಜ್ ಲೋಡರ್, 309 ಕ್ಲೀನರ್ ನೇಮಕಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ ತಿಳಿಸಿದರು. ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ನ ಅಜಯ್ ಧರಂ ಸಿಂಗ್ ಪ್ರಶ್ನೆಗೆ ಉತ್ತರಿಸಿದರು. ಜೇವರ್ಗಿ ಪುರಸಭೆಯಲ್ಲಿ 44 ಪೌರ ಕಾರ್ವಿುಕರ ಹುದ್ದೆ ಮಂಜೂರಾಗಿದ್ದು, 26 ಕಾಯಂ ಪೌರಕಾರ್ವಿುಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ 18 ಹುದ್ದೆ ಖಾಲಿ ಇವೆ. ಈ ಪುರಸಭೆಯಲ್ಲಿ ಒಟ್ಟು 10 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಮಾತೃಪೂರ್ಣ ಯೋಜನೆ ಮನೆಗೆ ತಲುಪಿಸಲು ಆಗ್ರಹ: ಮಾತೃಪೂರ್ಣ ಯೋಜನೆಯನ್ನು ಗರ್ಭಿಣಿಯರು/ಬಾಣಂತಿಯರ ಮನೆಗೆ ತಲುಪಿಸುವಂತೆ ಅನೇಕ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು. ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ನ ಟಿ.ಡಿ.ರಾಜೇಗೌಡ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಉತ್ತರಿಸುತ್ತಿದ್ದಾಗ ಸ್ಪೀಕರ್, ತುಂಬು ಗರ್ಭಿಣಿಯರು ದೂರದ ಅಂಗನವಾಡಿಗೆ ನಡೆದುಕೊಂಡು ಹೋಗಿ ಊಟ ಮಾಡಿಕೊಂಡು ಬರಲು ಆಗುತ್ತದೆಯೆ? ಇಂತಹ ಅವೈಜ್ಞಾನಿಕ ನಿಯಮ ಸರಿಪಡಿಸಿ ಎಂದು ಸಲಹೆ ನೀಡಿದರು. ಆಗ ಸಚಿವರು, 2017ಕ್ಕೂ ಮುಂಚೆ ಮನೆಗೆ ಆಹಾರ ಧಾನ್ಯ ಕೊಡಲಾಗುತ್ತಿತ್ತು. ತರುವಾಯ ಮನೆಯ ಬೇರೆಯವರು ಈ ಆಹಾರ ತಿನ್ನುತ್ತಾರೆ. ಸರ್ಕಾರದ ಉದ್ದೇಶ ಸದ್ವಿನಿಯೋಗವಾಗುತ್ತಿಲ್ಲ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಅದರನ್ವಯ 2017 ರಿಂದ ಈಚೆಗೆ ಅಂಗನವಾಡಿಯಲ್ಲೇ ಊಟ ತಯಾರಿಸಿ ನೀಡಲಾಗುತ್ತದೆ ಎಂದು ಹೇಳಿದರು. ಆ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್, ಇದು ಅವೈಜ್ಞಾನಿಕ ನಿಯಮವಾಗಿದ್ದು, ಸರಿಪಡಿಸಿ. ಕೇಂದ್ರದ ಮಾರ್ಗಸೂಚಿ ಏನಾದರೂ ಇದ್ದರೆ ಪತ್ರ ಬರೆದು ಸರಿಪಡಿಸಿ ಎಂದು ಸಲಹೆ ನೀಡಿದರು. ಅಧಿಕಾರಿಗಳು ತಮಗೆ ಅನುಕೂಲವಾಗುವ ರೀತಿಯಲ್ಲಿ ಏನೇನೋ ವರದಿಕೊಡುತ್ತಾರೆ. ಜನ ಉಗಿಯುತ್ತಾರೆ. ಮುಖ್ಯಮಂತ್ರಿಗಳ ಜತೆ ರ್ಚಚಿಸಿ ಮನೆಗೇ ಆಹಾರಧಾನ್ಯ ಒದಗಿಸಲು ಕ್ರಮ ಕೈಗೊಳ್ಳಿ ಎಂದರು.