

ಮೈಸೂರು: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ದಿಕ್ಸೂಚಿಯಾಗಿದ್ದು, ದೆಹಲಿಯಲ್ಲಿ ಕುಳಿತಿರುವ ಸರ್ಕಾರ ಬಡಜನರತ್ತ ನೋಡಬೇಕು ಎನ್ನುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಬುಧವಾರ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ‘ಗೃಹಲಕ್ಷ್ಮಿ’ಗೆ ಚಾಲನೆ ನೀಡಿ ಅವರು ಮಾತನಾಡಿದರು. ಯೋಜನೆಗೆ ಚಾಲನೆ ದೊರೆತ ಬೆನ್ನಲ್ಲೇ ರಾಜ್ಯದ 1.10 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗೆ ತಲಾ 2 ಸಾವಿರ ರೂ. ಏಕಕಾಲದಲ್ಲಿ ಜಮೆ ಆಗಿದೆ.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೊಷಿಸಿದಾಗ ಇವೆಲ್ಲ ಅಸಾಧ್ಯ. ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದರು. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದರೆ ಸರ್ಕಾರ ದಿವಾಳಿ ಆಗುತ್ತದೆ ಎಂದಿದ್ದರು. ಆದರೆ ಈಗ ಸತ್ಯ ನಿಮ್ಮ ಕಣ್ಣ ಮುಂದೆಯೇ ಇದೆ ಎಂದು ರಾಹುಲ್ ಗಾಂಧಿ ಹೇಳಿದರು.
ಕೇಂದ್ರ ಸರ್ಕಾರ ಬಂಡವಾಳಶಾಹಿಗಳಿಗಾಗಿ ಕೆಲಸ ಮಾಡುತ್ತಿದೆ. ಆದರೆ ಕರ್ನಾಟಕದಲ್ಲಿ ಐದು ಭರವಸೆಗಳು ಆಡಳಿತದ ನೀಲಿನಕ್ಷೆಯಾಗಿವೆ. ಬಡವರಿಗಾಗಿ ಸರ್ಕಾರಗಳು ಕೆಲಸ ಮಾಡಬೇಕು. ಜಾತಿ, ಧರ್ಮ ಮೀರಿ ಯೋಜನೆಗಳನ್ನು ತಲುಪಿಸಬೇಕು. ರಾಜ್ಯದ ಯೋಜನೆಗಳನ್ನು ಇಡೀ ದೇಶದಲ್ಲಿ ಮಾದರಿಯಾಗಿ ಜಾರಿಗೆ ತರಲಾಗುವುದು. ಇವು ದೇಶಕ್ಕೆ ಸರಿಯಾದ ದಾರಿ ತೋರಿವೆ. ಮಹಿಳೆಯರು ಉಚಿತವಾಗಿ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಪ್ರತಿ ಮನೆಗೂ ಉಚಿತವಾಗಿ 200 ಯೂನಿಟ್ವರೆಗೆ ವಿದ್ಯುತ್ ನೀಡಲಾಗುತ್ತಿದೆ.
ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ. ಶೀಘ್ರದಲ್ಲೇ ನಿರುದ್ಯೋಗಿಗಳಿಗಾಗಿ ಯುವನಿಧಿ ಕಾರ್ಯಕ್ರಮವನ್ನೂ ಅನುಷ್ಠಾನಗೊಳಿಸುವ ಮೂಲಕ ಕೊಟ್ಟ ಮಾತಿನಂತೆ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ ಎಂದರು.
ಗೃಹಲಕ್ಷ್ಮಿ ವಿಶ್ವದಲ್ಲೇ ಅತ್ಯಂತ ದೊಡ್ಡ ಯೋಜನೆ. ಇಂಥ ಯೋಜನೆ ಬೇರೆಲ್ಲೂ ಇಲ್ಲ. ನಾವು ಕೊಡುವ 2 ಸಾವಿರ ರೂ. ಸಣ್ಣದಲ್ಲ. ಅದು ಮಹಿಳೆಗೆ ಸಂರಕ್ಷಣೆ ನೀಡುತ್ತದೆ. ಅದನ್ನು ಉಳಿಸಿ ಮಕ್ಕಳ ಶಿಕ್ಷಣ, ಗೃಹಕೃತ್ಯಕ್ಕೆ ಬಳಸಬಹುದು. ನಾವು ಸುಳ್ಳು ಆಶ್ವಾಸನೆ ಕೊಡುವುದಿಲ್ಲ. ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ಸಾವಿರಾರು ಮಹಿಳೆಯರನ್ನು ಭೇಟಿ ಮಾಡಿದ್ದೆ. ರಾಜ್ಯದಲ್ಲಿ 600 ಕಿ.ಮೀ. ನಡೆದಿದ್ದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆ ಎಲ್ಲದರ ಹೊರೆ ಮಹಿಳೆಯರ ಮೇಲೇ ಬೀಳುತ್ತದೆ. ಆ ಬಗ್ಗೆ ಮಹಿಳೆಯರು ನನಗೆ ಹೇಳಿದ್ದರು. ಮಹಿಳೆಯರೇ ಈ ರಾಜ್ಯದ ಅಡಿಪಾಯ ಎಂದು ತಮ್ಮ ಅನುಭವ ಹಂಚಿಕೊಂಡರು. ಬೇರು ಗಟ್ಟಿ ಇದ್ದರೆ ಮರ ಭದ್ರವಾಗಿ ನಿಲ್ಲುತ್ತದೆ. ಯಾವುದೇ ಕುಟುಂಬ, ಊರು, ರಾಜ್ಯದ ಭದ್ರಬುನಾದಿ ಎಂದರೆ ಅದು ಮಹಿಳೆಯರು. ನಾವು ನೀಡಿದ ಐದು ಯೋಜನೆಗಳಲ್ಲಿ ನಾಲ್ಕು ಮಹಿಳೆಯರಿಗಾಗಿಯೇ ಇವೆ. ರಾಜ್ಯ ಸರ್ಕಾರ 100 ದಿನಗಳನ್ನು ಪೂರೈಸಿರುವ ಈ ಹೊತ್ತಿನಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ರಕ್ಷಾಬಂಧನದ ದಿನದಂದು ನಾಡಿನ ಕೋಟ್ಯಂತರ ಅಕ್ಕ-ತಂಗಿಯರಿಗೆ ಕೊಟ್ಟ ಮಾತನ್ನು ಈಡೇರಿಸಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.
ಚುನಾವಣೆಗೂ ಮುನ್ನ ಆಶ್ವಾಸನೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಅನುಷ್ಠಾನಗೊಂಡಿವೆ. ಉಳಿದಿರುವ ಯುವನಿಧಿ ಯೋಜನೆಯನ್ನು ಈ ವರ್ಷದ ಅಂತ್ಯ ಅಥವಾ ಮುಂದಿನ ಜನವರಿಯಲ್ಲಿ ಜಾರಿಗೊಳಿಸಲಾಗು ವುದು. ಈ ಹಿಂದೆ ಯಾವುದೇ ಸರ್ಕಾರ 100 ದಿನಗಳಲ್ಲಿ ನುಡಿದಂತೆ ನಡೆದುಕೊಂಡ ಉದಾಹರಣೆ ಕಾಣಲು ಸಾಧ್ಯವಿಲ್ಲ. | ಸಿದ್ದರಾಮಯ್ಯ, ಮುಖ್ಯಮಂತ್ರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಬಿಜೆಪಿ ನಾಯಕರ ಟೀಕೆಗಳಿಗೆ ತಕ್ಕ ಉತ್ತರ ನೀಡಿದೆ. ಇಲ್ಲಿನ ಯೋಜನೆಗಳಿಂದ ಪ್ರಭಾವಿತರಾಗಿರುವ ಇತರ ರಾಜ್ಯಗಳೂ ಯೋಜನೆ ಜಾರಿಗೆ ಮುಂದಾಗಿವೆ. | ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ ಇಡೀ ದೇಶದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ಇಂದಿರಾ ಗಾಂಧಿ ಅವರ ಕಾಲದ ಗತವೈಭವ ಮರುಕಳಿಸುತ್ತಿದೆ. ವಿಧಾನಸಭಾ ಚುನಾವಣೆ ಪೂರ್ವದಲ್ಲಿ ನಾವು ನೀಡಿದ್ದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಭರವಸೆ ಈಡೇರಿಸಿದ್ದೇವೆ. | ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ
1.10 ಕೋಟಿ ಮನೆಯೊಡತಿ ಖಾತೆಗೆ 2000 ರೂ.: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ 1.10 ಕೋಟಿ ಮಹಿಳೆಯರ ಖಾತೆಗೆ ತಲಾ 2 ಸಾವಿರ ರೂ. ಜಮೆ ಮಾಡುವ ಮೂಲಕ ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ನೀಡಲಾಯಿತು. ಅಂದಾಜು ಒಂದು ಲಕ್ಷ ಮಹಿಳೆಯರ ಸಮ್ಮುಖದಲ್ಲಿ ಇ-ಗೌರ್ನಿಂಗ್ ಗುಂಡಿ ಒತ್ತುವ ಮೂಲಕ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಏಕಕಾಲದಲ್ಲಿ ಹಣ ಜಮೆ ಮಾಡಲಾಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಿಮೋಟ್ ಒತ್ತುತ್ತಿದ್ದಂತೆಯೇ ವೇದಿಕೆ ಮುಂಭಾಗ ಅಳವಡಿಸಿದ್ದ ಚೆಕ್ ಮಾದರಿ ಮೇಲೆ ಬಂತು. ವೇದಿಕೆ ಮೇಲೆ ಅಷ್ಟಲಕ್ಷ್ಮಿಯರ ವೇಷ ಧರಿಸಿದ್ದ ಮಹಿಳೆಯರು ಕಾಣಿಸಿಕೊಂಡರು.
ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲ್ಯಾಪ್ಟಾಪ್ನಲ್ಲಿ ಗುಂಡಿ ಒತ್ತುವ ಮೂಲಕ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದರು. ಇದೇ ವೇಳೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರ ತಂದಿರುವ ಕಿರು ಪುಸ್ತಕವನ್ನು ಅನಾವರಣಗೊಳಿಸಲಾಯಿತು. ಗೃಹಲಕ್ಷ್ಮಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ರಾಜ್ಯಾದ್ಯಂತ 10,400 ಸ್ಥಳಗಳು, 6 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು, ನಗರಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿ ವಾರ್ಡ್ಗಳಲ್ಲಿ ಒಂದು ಕಡೆ, ಬೆಂಗಳೂರಿನ 198 ವಾರ್ಡ್ಗಳಲ್ಲಿ ಏಕಕಾಲಕ್ಕೆ ನೇರ ಪ್ರಸಾರ ಮಾಡಲಾಯಿತು.