ಕಲ್ಯಾಣ ಮಂಟಪವಾಯ್ತು ಆಸ್ಪತ್ರೆ; ಡೆಂಘಿ ರೋಗಿಗೆ ಆಸ್ಪತ್ರೆಯಲ್ಲೇ ಮದುವೆ

Dengue Patient
Published on

ಲಖನೌ: ಡೆಂಗ್ಯೂ ವೈರಸ್​ ಸೊಳ್ಳೆಗಳಿಂದ ಉಂಟಾಗುವ ಖಾಯಿಲೆಯಾಗಿದ್ದು, ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯನ್ನು ವೈದ್ಯರು ತೀವ್ರ ನಿಗಾದಲ್ಲಿ ಇರಿಸಿ ಚಿಕಿತ್ಸೆ ಕೊಡುವುದನ್ನು ನಾವು ನೋಡಿರುತ್ಥೇವೆ. ಆದರೆ, ವಿಶೇಷ ಪ್ರಕರಣ ಒಂದರಲ್ಲಿ ಡಂಗ್ಯೂದಿಂದ ಬಳಲುತ್ತಿರುವ ವ್ಯಕ್ತಿಯ ಮದುವೆಯನ್ನು ಆಸ್ಪತ್ರೆಯಲ್ಲೇ ನಡೆಸಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್​ನಲ್ಲಿ ಬೆಳಕಿಗೆ ಬಂದಿದೆ.

ಗಾಜಿಯಾಬಾದ್​ನ ಮ್ಯಾಕ್ಸ್​ ವೈಶಾಲಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಮದುವೆಯಾದ ಬಳಿಕ ವರ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಮದುವೆಯ ಸುದ್ದಿ ವೈರಲ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು, ವರ ಅವಿನಾಶ್​ ಕುಮಾರ್​ ತನ್ನ ಮದುವೆಗೆ ನಾಲ್ಕು ದಿನಗಳು ಬಾಕಿ ಇರುವ ಸಮಯದಲ್ಲಿ ಆತನ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಡೆಂಗ್ಯೂನಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಆತನ ಪ್ಲೇಟ್​ಲೆಟ್​ಗಳು ಸಹ 10 ಸಾವಿರಕ್ಕಿಂತ ಕಡಿಮೆ ಇದ್ದವು ಮತ್ತು ಇದು ಅವರ ಜೀವಕ್ಕೆ ಅಪಾಯವನ್ನುಂಟು ಮಾಡಿತ್ತು.

ಬಳಿಕ ವರ ಅವಿನಾಶ್​ ತಂದೆ ಮದುವೆಯನ್ನು ಮುಂದೂಡಲು ನಿರ್ಧರಿಸಿದ್ದು, ಇದಕ್ಕೆ ವಧುವಿನ ಕಡೆಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಗದಿಯಾಗಿರುವ ಮುಹೂರ್ತದಲ್ಲೇ ಮದುವೆ ಮಾಡಬೇಕು ಎಂದು ವಧುವಿನ ಕಡೆಯವರು ಪಟ್ಟು ಹಿಡಿದಿದ್ದು, ಬಳಿಕ ಆಸ್ಪತ್ರೆಯ ಹಾಲ್​ನಲ್ಲಿ ಮದುವೆಯನ್ನು ಸರಳವಾಗಿ ಉಭಯ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿಸಲಾಗಿದೆ.

ವರ ಅವಿನಾಶ್​ ಚಿಕಿತ್ಸೆ ಪಡೆಯುತ್ತಿದ್ದು, ಸಂಪೂರ್ಣವಾಗಿ ಗುಣಮುಖರಾದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗುವುದು ಮತ್ತು ನವದಂಪತಿಗಳಿಗೆ ಮತ್ತೊಮ್ಮೆ ಸಿಬ್ಬಂದಿ ವತಿಯಿಂದ ಶುಭ ಹಾರೈಸಲಾಗುವುದು ಎಂದು ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net