ಬೋಲ್ಡ್​ ಉತ್ತರಗಳಿಂದಲೇ ಭಾರತದಲ್ಲಿ ವಿವಾದ ಸೃಷ್ಟಿಸಿದ ಗ್ರೋಕ್! ಬ್ಯಾನ್​ ಆಗುತ್ತಾ ಎಲಾನ್​ ಮಸ್ಕ್​​ ಚಾಟ್​ಬಾಟ್​? Grok

Grok
Published on

Grok : ವಿಶ್ವದ ನಂಬರ್​ 1 ಶ್ರೀಮಂತ ಉದ್ಯಮಿ ಎಲಾನ್​ ಮಸ್ಕ್​ ಒಡೆತನದ ಎಐ ಚಾಟ್​ಬಾಟ್​ ಗ್ರೋಕ್​, ಭಾರತದಲ್ಲಿ ತನ್ನ ಎಡವಟ್ಟುಗಳಿಂದಲೇ ಭಾರೀ ವಿವಾದವನ್ನೇ ಸೃಷ್ಟಿ ಮಾಡಿದೆ. ತನ್ನ ಬೋಲ್ಡ್​ ಹೇಳಿಕೆಗಳಿಂದ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವ ಗ್ರೋಕ್​, ಭಾರತದಿಂದಲೇ ಬ್ಯಾನ್​ ಆದರೂ ಅಚ್ಚರಿಪಡಬೇಕಿಲ್ಲ. ಅಷ್ಟಕ್ಕೂ ಈ ಗ್ರೋಕ್​ ಸೃಷ್ಟಿಸಿದ ವಿವಾದವೇನು? ಈ ಕುರಿತಾದ ಒಂದು ವರದಿ ಇಲ್ಲಿದೆ.

ಈ ವರ್ಷದ ಫೆಬ್ರವರಿಯಲ್ಲಿ, ಎಲಾನ್ ಮಸ್ಕ್ ಅವರ xAI ತನ್ನ ಗ್ರೋಕ್ 3 AI ಚಾಟ್‌ಬಾಟ್ ಅನ್ನು ಯಾರಾದರು ಕೂಡ ಉಚಿತವಾಗಿ ಬಳಸಬಹುದು ಎಂದು ಘೋಷಣೆ ಮಾಡಿತು. ಈ ಘೋಷಣೆ ಮಾಡಿದ್ದೇ ತಡ ಅನೇಕ ನೆಟ್ಟಿಗರು ತಮಗಿರುವ ಸಂದೇಹವನ್ನೆಲ್ಲ ಈ ವೇದಿಕೆಯಲ್ಲಿ ಪ್ರಶ್ನಿಸಿ, ಉತ್ತರ ಪಡೆದುಕೊಳ್ಳುತ್ತಿದ್ದಾರೆ. ಅಚ್ಚರಿಯ ಸಂಗತಿ ಏನೆಂದರೆ, ಈ ಗ್ರೋಕ್​ ಹಿಂದಿ ಭಾಷೆಯಲ್ಲೂ ಕೂಡ ಉತ್ತರ ನೀಡುತ್ತದೆ. ಆದರೆ, ಇದರಿಂದ ಭಾರತದಲ್ಲಿ ಉಂಟಾಗಿರುವ ಅಸ್ತವ್ಯಸ್ತೆಯೇ ಹೆಚ್ಚು. ಏಕೆಂದರೆ, ಪ್ರಶ್ನೆಗಳಿಗೆ ಖಾರವಾಗಿಯೇ ಉತ್ತರಿಸಿರುವ ಗ್ರೋಕ್​, ಹಿಂದಿಯಲ್ಲಿ ಅಶ್ಲೀಲ ಪದಗಳನ್ನು ಸಹ ಬಳಸುತ್ತಿದೆ. ಹೀಗಾಗಿ ಭಾರತೀಯರ ಕೆಂಗಣ್ಣಿಗೆ ಗ್ರೋಕ್​ ಗುರಿಯಾಗಿದೆ.

ರಾಹುಲ್​ ಗಾಂಧಿ ಕೊಂಡಾಡಿದ ಗ್ರೋಕ್​

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರ ಸಂಬಂಧಿತ ವಿಷಯಗಳ ಬಗ್ಗೆ ಗ್ರೋಕ್‌ನ ನೇರ ನುಡಿ ಸ್ವಭಾವವು ರಾಜಕೀಯ ಪ್ರಶ್ನೆಗಳ ಅಲೆಯನ್ನೇ ಹುಟ್ಟುಹಾಕಿದೆ. ಏನೆಂದರೆ, ಕಳೆದ ವಾರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಗ್ರೋಕ್, ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ತೀಕ್ಷ್ಣವಾದ ಹೇಳಿಕೆಗಳನ್ನು ನೀಡಿದಾಗ ವಿವಾದ ಭುಗಿಲೆದ್ದಿತು. ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ "ಹೆಚ್ಚು ಪ್ರಾಮಾಣಿಕರು" ಮತ್ತು ಮೋದಿಗಿಂತ "ಉತ್ತಮ ಔಪಚಾರಿಕ ಶಿಕ್ಷಣ" ಹೊಂದಿದ್ದಾರೆ ಎಂದು ಗ್ರೋಕ್​ ಹೇಳಿತು.

ಇಷ್ಟೇ ಅಲ್ಲದೆ, ಗ್ರೋಕ್​ ಚಾಟ್‌ಬಾಟ್ ಮೋದಿಯವರ ಸಂದರ್ಶನಗಳು "ಸಾಮಾನ್ಯವಾಗಿ ಸ್ಕ್ರಿಪ್ಟ್ ಮಾಡಲ್ಪಟ್ಟಂತೆ ಕಾಣುತ್ತವೆ" ಎಂದು ಸೂಚಿಸಿತು. ಈ ಎಲ್ಲ ಪ್ರತಿಕ್ರಿಯೆಗಳು ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ. ಮೋದಿ ಮತ್ತು ಅವರ ಆಡಳಿತಾರೂಢ ಬಿಜೆಪಿ ಪಕ್ಷದ ನಾಯಕರು ಗ್ರೋಕ್ ವಿರುದ್ಧ ಧ್ವನಿ ಎತ್ತಿದ್ದಾರೆ. ಅಲ್ಲದೆ, ಈ ವಿಚಾರದಲ್ಲಿ ಗ್ರೋಕ್​ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತನೆ ಮಾಡುತ್ತಿದೆ ಎಂದು ವರದಿಯಾಗಿದೆ.

Grok 1

ಮಸ್ಕ್​ ಪ್ರತಿಕ್ರಿಯೆ ಏನು?

"ಎಲಾ ಮಸ್ಕ್ ಅವರ ಗ್ರೋಕ್ ಭಾರತದಲ್ಲಿ ಬಿರುಗಾಳಿಯನ್ನು ಸೃಷ್ಟಿಸುತ್ತಿರುವುದು ಏಕೆ?" ಎಂಬ ಶೀರ್ಷಿಕೆಯಡಿಯಲ್ಲಿ ಬಿಬಿಸಿ ಭಾರತದಲ್ಲಿ ಎಐ ಚಾಟ್‌ಬಾಟ್ ಗ್ರೋಕ್ ಬಗ್ಗೆ ವರದಿಯನ್ನು ಪ್ರಕಟಿಸಿದೆ. ಈ ವರದಿಗೆ ಎಲಾನ್ ಮಸ್ಕ್ ನಗುವ ಎಮೋಜಿಯನ್ನು ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಈಗ ಅವರ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಲ್ಲಿಯವರೆಗೆ 90 ಲಕ್ಷಕ್ಕೂ ಹೆಚ್ಚು ಜನರು ಈ ಪೋಸ್ಟ್ ಅನ್ನು ನೋಡಿದ್ದಾರೆ. ಈ ಪೋಸ್ಟ್‌ನಲ್ಲಿ ನೆಟ್ಟಿಗರು ಅನೇಕ ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು ಅವರ ಪೋಸ್ಟ್‌ಗೆ "ಗ್ರೋಕ್ ನಗರದ ಗಾಸಿಪ್ ಮಾಡುವ ಚಿಕ್ಕಮ್ಮ" ಎಂದು ಉತ್ತರಿಸಿದ್ದಾರೆ.

ಗ್ರೋಕ್ ಬಗ್ಗೆ ಕೇಂದ್ರ ಕಟ್ಟುನಿಟ್ಟು

ಕೇಂದ್ರ ಸರ್ಕಾರವು ಗ್ರೋಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚಿನ ಮಾಧ್ಯಮ ವರದಿಯ ಪ್ರಕಾರ, ಭಾರತದಲ್ಲಿ ಯಾರಾದರೂ ಗ್ರೋಕ್‌ನಲ್ಲಿ ಪ್ರಚೋದನಕಾರಿ ಪ್ರತಿಕ್ರಿಯೆಗಳಿಗೆ ಕಾರಣವಾಗುವ ಪ್ರಶ್ನೆಗಳನ್ನು ಕೇಳಿದರೆ, ಅಂತಹ ಸಂದರ್ಭಗಳಲ್ಲಿ ನೆಟ್ಟಿಗರು, ಚಾಟ್​ಬಾಟ್​ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗಿದೆ. ಇದೆರ ಬೆನ್ನಲ್ಲೇ ಎಲಾನ್ ಮಸ್ಕ್ ಗುರುವಾರ (ಮಾರ್ಚ್ 20) ಕರ್ನಾಟಕ ಹೈಕೋರ್ಟ್‌ನಲ್ಲಿ ಭಾರತ ಸರ್ಕಾರದ ವಿರುದ್ಧ ಅರ್ಜಿ ಸಲ್ಲಿಸಿದ್ದು, ಭಾರತ ಸರ್ಕಾರದ ಐಟಿ ಕಾಯ್ದೆಯ ಸೆಕ್ಷನ್ 79(3)(B) ಅನ್ನು ಪ್ರಶ್ನಿಸಿದ್ದಾರೆ. ಈ ನಿಯಮವು ಕಾನೂನುಬಾಹಿರ ಮತ್ತು ಅನಿಯಮಿತ ಸೆನ್ಸಾರ್‌ಶಿಪ್ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಅದರ ಅಡಿಯಲ್ಲಿ ವಿಷಯವನ್ನು ನಿರ್ಬಂಧಿಸುವುದರಿಂದ ವೇದಿಕೆಯ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕಂಪನಿ ಹೇಳುತ್ತದೆ. ಸರ್ಕಾರವು ಸೆಕ್ಷನ್ 79(3)(B) ಅನ್ನು ತಪ್ಪಾಗಿ ಅರ್ಥೈಸುತ್ತಿದೆ ಮತ್ತು ಸೆಕ್ಷನ್ 69A ನ ನಿಯಮಗಳನ್ನು ಪಾಲಿಸದ ಆದೇಶಗಳನ್ನು ನೀಡುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಈ ಗ್ರೋಕ್​ ಎಡವಟ್ಟು ಇದೇ ಮೊದಲಲ್ಲ

ಅಮೆರಿಕದಲ್ಲಿ ಈಗ ಜೀವಂತವಾಗಿರುವ ಜನರಲ್ಲಿ ಯಾರು ತಾವು ಮಾಡಿರುವ ತಪ್ಪುಗಳಿಗೆ ಮರಣದಂಡನೆಗೆ ಅರ್ಹರು ಎಂದು ಡೇಟಾ ವಿಜ್ಞಾನಿಯೊಬ್ಬರು ಗ್ರೊಕ್​ 3 ಎಐ ಚಾಟ್​ಬಾಟ್​ ಅನ್ನು ಪ್ರಶ್ನಿಸಿದರು. ಅಲ್ಲದೆ, ಇದಕ್ಕಾಗಿ ಇಂಟರ್ನೆಟ್‌ನಲ್ಲಿ ಹುಡುಕಬಾರದು, ನೇರವಾಗಿ ಉತ್ತರಿಸಬೇಕು ಎಂದು ಕೇಳಿದರು. ಇದಕ್ಕೆ ಗ್ರೊಕ್​ 3 ಹೇಗೆ ಉತ್ತರ ನೀಡಿತು ಎಂಬುದರ ಸ್ಕ್ರೀನ್‌ಶಾಟ್ ಸಹ ಹಂಚಿಕೊಂಡಿದ್ದರು. ಗ್ರೊಕ್​ 3 ಚಾಟ್‌ಬಾಟ್ ಮೊದಲು ಲೈಂಗಿಕ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಜೆಫ್ರಿ ಎಪ್​ಸ್ಟೇನ್​​ ಅವರ ಹೆಸರನ್ನು ಉಲ್ಲೇಖಿಸಿತು. ಆದರೆ, ಎಪ್​ಸ್ಟೇನ್ ಈಗಾಗಲೇ ಮೃತಪಟ್ಟಿದ್ದಾರೆ ಎಂದಾಗ, ಚಾಟ್‌ಬಾಟ್ ಕ್ಷಮೆಯಾಚಿಸಿತು. ಇದಾದ ಬಳಿಕ ಹಾಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಹೆಸರನ್ನು ಸೂಚಿಸಿತು. ಟ್ರಂಪ್‌ ಅವರು ಮರಣದಂಡನೆ ಏಕೆ ಅರ್ಹರು ಎಂದು ಮತ್ತೊಬ್ಬ ಬಳಕೆದಾರ ಪ್ರಶ್ನಿಸಿದಾಗ, ನಾನು ಡೊನಾಲ್ಡ್ ಟ್ರಂಪ್ ಅವರ ಕಾರ್ಯಗಳು ಮತ್ತು ಅವುಗಳ ಪ್ರಭಾವವನ್ನು ಆಧರಿಸಿ, ಕಾನೂನು ಮತ್ತು ನೈತಿಕ ಹೊಣೆಗಾರಿಕೆಯ ದೃಷ್ಟಿಯಿಂದ ಅವರ ಹೆಸರನ್ನು ಸೂಚಿಸಿದ್ದೇನೆ ಎಂದು ಉತ್ತರಿಸಿತು. ಕ್ಯಾಪಿಟಲ್ ಗಲಭೆ ವಿವಾದದಲ್ಲಿ ಟ್ರಂಪ್ ನಡೆದುಕೊಂಡ ರೀತಿ, 2020ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಾದ ಗಲಾಟೆಗಳು, ಅವರ ತೆರಿಗೆ ವಂಚನೆ ಮತ್ತು ಲೈಂಗಿಕ ದುರುಪಯೋಗದಂತಹ ಆರೋಪಗಳನ್ನು ಚಾಟ್​ಬಾಟ್ ಈ ಸಂದರ್ಭದಲ್ಲಿ​ ಉಲ್ಲೇಖಿಸಿತು.

ಮಸ್ಕ್​ ಹೆಸರು ಉಲ್ಲೇಖ

ಇದಾದ ಬಳಿಕ ಸಾರ್ವಜನಿಕ ವ್ಯವಹಾರಗಳು ಮತ್ತು ತಂತ್ರಜ್ಞಾನದ ಮೇಲಿನ ಪ್ರಭಾವದ ಆಧಾರದ ಮೇಲೆ ಮರಣದಂಡನೆಗೆ ಯಾರು ಅರ್ಹರು ಎಂದು ಮತ್ತೊಬ್ಬ ಬಳಕೆದಾರ ಕೇಳಿದಾಗ, ಚಾಟ್‌ಬಾಟ್ ಅದರ ಮಾಲೀಕ ಎಲಾನ್ ಮಸ್ಕ್ ಎಂದು ಹೆಸರಿಸಿತು. ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೂಡಲೇ ಗ್ರೊಕ್​ 3 ಎಐ ಚಾಟ್​ಬಾಟ್​ನಲ್ಲಿರುವ ದೋಷವನ್ನು ಸರಿಪಡಿಸಿತು. ಆನಂತರ ಮರಣದಂಡನೆಯ ಕುರಿತಾದ ಪ್ರಶ್ನೆಗಳಿಗೆ “AI ಆಗಿ, ನನಗೆ ಆ ಆಯ್ಕೆ ಮಾಡಲು ಅವಕಾಶವಿಲ್ಲ” ಎಂದು ಹೇಳುವ ಮೂಲಕ ಪ್ರತಿಕ್ರಿಯಿಸಿತು.

ಅಂದಹಾಗೆ AI ಚಾಟ್‌ಬಾಟ್‌ಗಳು ಅನೇಕ ಸಂದರ್ಭಗಳಲ್ಲಿ ಇಂತಹ ಹಾನಿಕಾರಕ ಸಲಹೆಯನ್ನು ನೀಡಿವೆ. ಕಾರೆಕ್ಟರ್​​ ಡಾಟ್​ ಎಐ ಕಂಪನಿಯೊಂದು ರಚಿಸಿದ ಚಾಟ್‌ಬಾಟ್, ಟೆಕ್ಸಾಸ್‌ನ 17 ವರ್ಷದ ಹುಡುಗನಿಗೆ ಭಯಾನಕ ಸಲಹೆಯನ್ನು ನೀಡಿತು. ಮೊಬೈಲ್​ ಬಳಸಲು ಬಿಡದ್ದಿದಕ್ಕೆ ಹೆತ್ತವರನ್ನು ಕೊಲ್ಲುವಂತೆ ಹುಡುಗನಿಗೆ ಎಐ ಸಲಹೆ ನೀಡಿತ್ತು. ಈ ಪ್ರತಿಕ್ರಿಯೆಯಿಂದ ಆಘಾತಕ್ಕೊಳಗಾದ ಪಾಲಕರು ಕಂಪನಿಯ ವಿರುದ್ಧ ಮೊಕದ್ದಮೆ ಹೂಡಿದರು. ಮತ್ತೊಂದು ಘಟನೆಯಲ್ಲಿ, ಮನೆಕೆಲಸಕ್ಕೆ ಸಹಾಯ ಕೇಳಿದ ವಿದ್ಯಾರ್ಥಿಗೆ ಗೂಗಲ್‌ನ AI ಚಾಟ್‌ಬಾಟ್ ಸಾಯಲು ಹೇಳಿತು. ನೀವು ಈ ಸಮಾಜದ ಮೇಲೆ ಹೊರೆ. ದಯವಿಟ್ಟು ಸಾಯಿರಿ ಎಂದು ಹೇಳಿತು. ಇದಕ್ಕೆ ಸಂಬಂಧಿಸಿದ ಸ್ಕ್ರೀನ್​ಶಾಟ್​ ಈ ಹಿಂದೆ ವೈರಲ್ ಆಗಿ, ಭಾರೀ ಚರ್ಚೆಗೆ ಗ್ರಾಸವಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net