

ಬಾಳೆಹೊನ್ನೂರು: ಪ್ರತಿ ಮಹಿಳೆಯೂ ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಉದ್ದೇಶದಿಂದಲೇ ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದಿದೆ ಎಂದು ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ ಹೇಳಿದರು.
ಬಿ.ಕಣಬೂರು ಗ್ರಾಪಂನಿಂದ ವಿಜಯಮಾತೆ ಚರ್ಚ್ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ರಾಜ್ಯದ ಮಹಿಳೆಯರಿಗಾಗಿ ವಿವಿಧ ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನದ ಒಳಗೆ 4 ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಈ ಮೂಲಕ ಮಹಿಳೆಯರ ಸ್ವಾವಲಂಬಿ, ಸದೃಢ ಜೀವನಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿದೆ ಎಂದರು.
ರಾಜ್ಯ ಸರ್ಕಾರ ನುಡಿದಂತೆ ನಡೆದಿದ್ದು, ಜನರ ಆಶಯಗಳಿಗೆ ಪೂರಕವಾಗಿ ಸ್ಪಂದಿಸುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಮುಂದಿನ ದಿನಗಳಲ್ಲಿಯೂ ಜನತೆಗೆ ಹಲವಾರು ಕೊಡುಗೆಗಳನ್ನು ನೀಡುವುದಕ್ಕೆ ಬದ್ಧವಿದೆ ಎಂದು ಹೇಳಿದರು.
ಗ್ರಾಪಂ ಸದಸ್ಯ ರವಿಚಂದ್ರ ಮಾತನಾಡಿ, ಗೃಹಲಕ್ಷ್ಮೀ ಯೋಜನೆ ಐದು ವರ್ಷಗಳ ಕಾಲ ಜಾರಿಯಲ್ಲಿರುತ್ತದೆ. ಮಹಿಳೆಯರ ಆರ್ಥಿಕಾಭಿವೃದ್ಧಿ, ಕುಟುಂಬ ನಿರ್ವಹಣೆಗೆ ಯೋಜನೆ ಪೂರಕವಾಗಲಿದೆ ಎಂದರು.
ಗ್ರಾಪಂ ಉಪಾಧ್ಯಕ್ಷೆ ರಂಜಿತಾ, ಸದಸ್ಯರಾದ ಎಂ.ಎಸ್.ಅರುಣೇಶ್, ಎಂ.ಜೆ.ಮಹೇಶ್ ಆಚಾರ್ಯ, ಜಾನಕಿ, ಕೋಕಿಲಮ್ಮ, ಪ್ರತಿಮಾ, ಶಶಿಕಲಾ, ಇಬ್ರಾಹಿಂ ಶಾಫಿ, ಅಂಬುಜಾ, ಶಿವಪ್ಪ, ಶೇಖರ, ಕಾರ್ಯದರ್ಶಿ ರಾಮಪ್ಪ, ಸುಪ್ರೀತ್ ಇತರರಿದ್ದರು.