

ಬೆಂಗಳೂರು: ಅಂತೂ ಇಂತೂ ಗ್ರಾಮೀಣ ಪ್ರದೇಶದ ಬಡವರಿಗೆ ಸಿಗಲಿದೆ ವಸತಿ ಭಾಗ್ಯ. ಹೋದಲ್ಲಿ, ಬಂದಲ್ಲಿ ವಸತಿ ಅಹವಾಲುಗಳನ್ನು ಆಲಿಸಿ ಹೈರಾಣಾಗಿದ್ದ ಶಾಸಕರೂ ನಿರಾಳಾಗಲಿದ್ದಾರೆ. ವಿವಿಧ ವಸತಿ ಯೋಜನೆಗಳಡಿ ಗ್ರಾಮೀಣ ಪ್ರದೇಶದಲ್ಲಿ ನಾಲ್ಕು ಲಕ್ಷ ಮನೆಗಳ ನಿರ್ವಣದ ಗುರಿಯನ್ನು ರಾಜ್ಯ ಸರ್ಕಾರ ನೀಡಿದ್ದು, ಪ್ರಸಕ್ತ ಆರ್ಥಿಕ ವರ್ಷ (2021-22)ಕ್ಕೆ ಫಲಾನುಭವಿ ಗಳನ್ನು ನಿಯಮಾನುಸಾರ ಫಲಾನುಭವಿಗಳನ್ನು ಆಯ್ಕೆ ಮಾಡಲು ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಸೂಚಿಸಿದೆ. ಸರ್ಕಾರದ ಸೂಚನೆ ಬೆನ್ನಲ್ಲೇ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಬಸವರಾಜು ಕಾರ್ಯಪ್ರವೃತ್ತರಾಗಿದ್ದು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದು, ಗ್ರಾಮಸಭೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ತಿಳಿಸಿದ್ದಾರೆ.
ಗ್ರಾ.ಪಂ.ವಾರು ಗುರಿ ನಿಗದಿ: 2018ರಲ್ಲಿ ನಡೆಸಿದ ವಸತಿರಹಿತರ ಪಟ್ಟಿಯಲ್ಲಿನ ಹಾಗೂ ಒಂದು ವೇಳೆ ಅರ್ಹ ಫಲಾನುಭವಿಗಳು ಬಿಟ್ಟು ಹೋಗಿದ್ದಲ್ಲಿ ಸೇರ್ಪಡೆ ಮಾಡಿ ಗ್ರಾಮಸಭಾ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಹೇಳಿದ್ದಾರೆ. ಆಯಾ ಜಿಲ್ಲೆಯ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಫಲಾನುಭವಿಗಳ ಆಯ್ಕೆ ಗುರಿ ನಿಗದಿಪಡಿಸಲಾಗಿದೆ. 25 ಮತ್ತು ಅದಕ್ಕಿಂತ ಹೆಚ್ಚು ಸದಸ್ಯರು ಇರುವ ಗ್ರಾ.ಪಂ.ಗಳಿಗೆ ತಲಾ 50 ಮನೆಗಳು, 15ಕ್ಕಿಂತ ಹೆಚ್ಚು 25ಕ್ಕಿಂತ ಕಡಿಮೆ ಸದಸ್ಯರಿರುವ ಗ್ರಾ.ಪಂ.ಗಳಿತೆ ತಲಾ 40 ಮತ್ತು 15ಕ್ಕಿಂತಲೂ ಕಡಿಮೆ ಸದಸ್ಯರಿರುವ ಗ್ರಾ.ಪಂ.ಗಳಿಗೆ ತಲಾ 30 ಮನೆಗಳ ಗುರಿಯಿದೆ. ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿದಂತೆ ಆಯಾ ಕ್ಷೇತ್ರದ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ಗಮನಕ್ಕೆ ತರುವುದು ಕಡ್ಡಾಯವೆಂದು ಜಿ.ಪಂ. ಸಿಇಒಗಳಿಗೆ ನಿಗಮ ಸೂಚಿಸಿದೆ.
ಸರ್ಕಾರಕ್ಕೆ ಒತ್ತಡ: ಕಳೆದ ಮೂರು ವರ್ಷಗಳಿಂದ ವಸತಿ ಯೋಜನೆ ಬಹುತೇಕ ಸ್ಥಗಿತವಾಗಿದ್ದು, ಕ್ಷೇತ್ರದ ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಆಡಳಿತ ಪಕ್ಷದ ಸದಸ್ಯರು ಆತಂಕ ವ್ಯಕ್ತಪಡಿಸಿದ್ದರು. ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಒತ್ತಡ ಹೇರಿದ್ದರೆ, ವಿಧಾನ ಮಂಡಲದ ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳಿಂದ ಒಕ್ಕೊರಲ ಒತ್ತಾಯ ಕೇಳಿಬಂದಿತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ವಸತಿ ಯೋಜನೆಗೆ 3,000 ಕೋಟಿ ರೂ. ಮೀಸಲಿಟ್ಟರೆ, 29,000 ಕೋಟಿ ರೂ. ವೆಚ್ಚದ ಮನೆಗಳು ಮಂಜೂರು ಮಾಡಿದ್ದು ಈ ಸಮಸ್ಯೆಯ ಮೂಲವೆಂದು ಅಧಿವೇಶನದಲ್ಲಿ ಸರ್ಕಾರ ಪರೋಕ್ಷವಾಗಿ ಪ್ರಸ್ತಾಪಿಸಿದರೆ, ಜೆಡಿಎಸ್ ನೇರವಾಗಿ ತಿವಿದಿತ್ತು. ಅಪೂರ್ಣ ಮನೆಗಳು ಲಾಕ್, ತಾಂತ್ರಿಕ ಮತ್ತು ಫಲಾನುಭವಿಗಳ ನಿರಾಸಕ್ತಿಯಿಂದ ರದ್ದಾಗಿದ್ದರೆ, ಅನುದಾನದ ಅಲಭ್ಯತೆಯಿಂದ ಸರ್ಕಾರ ಸುಸ್ತಾಗಿತ್ತು. ಆರ್ಥಿಕ ಪರಿಸ್ಥಿತಿ ಚೇತರಿಸಿಕೊಂಡ ಬಳಿಕ ಲಭ್ಯ ಅನುದಾನದಂತೆ ವಸತಿ ಯೋಜನೆಗೆ ಮತ್ತೆ ಚಾಲನೆ ನೀಡಿದ್ದು, ಬೇಡಿಕೆ ಅಪಾರವಾಗಿದ್ದರೂ ನಾಲ್ಕು ಲಕ್ಷ ಮನೆಗಳ ನಿರ್ಮಾಣಕ್ಕೆ ಮುಂದಾಗಿದೆ.