

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ರಾಜಧಾನಿಯಲ್ಲಿ ಅನಾರೋಗ್ಯಕ್ಕೀಡಾದವರು ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಧಾವಿಸುವವರು ವಾಹನದಟ್ಟಣೆಗೆ ಸಿಲುಕುವ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಇದನ್ನು ತಪ್ಪಿಸುವ ಸಲುವಾಗಿ ಬೆಂಗಳೂರು ನಗರ ಸಂಚಾರ ವಿಭಾಗ ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್‌ಗಳು ಟ್ರಾಫಿಕ್‌ನಲ್ಲಿ ಸಿಲುಕಿ ರೋಗಿಗಳನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆ ತಲುಪಲು ಹೊಸ ತಂತ್ರಜ್ಞಾನ ಅಳವಡಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಶೇಷಾದ್ರಿಪುರ ಜಂಕ್ಷನ್‌ನಿಂದ ಕೆ.ಸಿ.ಜನರಲ್ ಆಸ್ಪತ್ರೆವರೆಗೂ ಪ್ರಯೋಗಿಕವಾಗಿ ಜಾರಿಗೆ ತರಲಾಗಿದ್ದ ಯೋಜನೆ ಯಶಸ್ವಿಯಾಗಿದೆ. ಆದರೆ ಯಾವ ಆಂಬುಲೆನ್ಸ್‌ಗಳಲ್ಲಿ ಈ ತಂತ್ರಜ್ಞಾನ ಅಳವಡಿಸಬೇಕೆಂಬುದು ಕಗ್ಗಂಟಾಗಿದೆ.
ಆಂಬುಲೆನ್ಸ್ ಬಂದ ಕೂಡಲೇ ಸಿಗ್ನಲ್‌ಗಳಲ್ಲಿ ಹಸಿರು ದೀಪ ಆನ್ ಆಗುವಂತೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಒಳಗೊಂಡ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಈಗಾಗಲೇ ಆಂಬುಲೆನ್ಸ್ಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಸಂಚಾರ ನಿರ್ವಹಣಾ ಕೇಂದ್ರದೊಂದಿಗೆ (ಟಿಎಂಸಿ) ಇಂಟರ್‌ಲಿಂಕ್ ಮಾಡಲಾಗಿದೆ. ನಗರದಲ್ಲಿ ಕೆ.ಸಿ. ಜನರಲ್ ಆಸ್ಪತ್ರೆಗಳಿಗೆ ಹೆಚ್ಚಾಗಿ ಆಂಬುಲೆನ್ಸ್‌ಗಳ ಓಡಾಟ ನಡೆಸುತ್ತಿವೆ. ಆದರಿಂದ ಶೇಷಾದ್ರಿಪುರದಿಂದ ಕೆ.ಸಿ. ಜನರಲ್ ಆಸ್ಪತ್ರೆವರೆಗೆ 10 ಜಂಕ್ಷನ್‌ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಕ್ಯಾಮರಾ ಅಳವಡಿಸಲಾಗಿದೆ.
ಸಿಗ್ನಲ್ಗೆ 100 ಮೀಟರ್ ಸಮೀಪಕ್ಕೆ ಆಂಬುಲೆನ್ಸ್ ಬಂದರೆ ಸಾಕು, ಕಂಟ್ರೋಲರ್‌ಗೆ ಮಾಹಿತಿ ಹೋಗಲಿದೆ. 50 ಮೀಟರ್ ದೂರ ಇದ್ದಾಗ ಸ್ವಯಂಚಾಲಿತವಾಗಿ ಗ್ರೀನ್ ಸಿಗ್ನಲ್ ತೋರಿಸುತ್ತದೆ. ಇದರಿಂದ ಆಂಬುಲೆನ್ಸ್ಗೆ ಸುಗಮವಾಗಿ ದಾರಿ ಮಾಡಿಕೊಟ್ಟಂತಾಗುತ್ತದೆ.
ಕೆಲವೊಮ್ಮೆ ಸಂಚಾರ ಪೊಲೀಸರು ಸಿಗ್ನಲ್‌ನಲ್ಲಿ ಇಲ್ಲದೆ ಮತ್ತು ಕೆಂಪುದೀಪ ಇದೆ ಎಂದು ಇತರ ವಾಹನ ಚಾಲಕ/ ಸವಾರರು ಮುಂದೆ ಸಾಗಲು ಹಿಂದೇಟು ಹಾಕಿ, ಟ್ರಾಫಿಕ್‌ನಲ್ಲಿಆಂಬುಲೆನ್ಸ್ ಸಿಲುಕಿ ರೋಗಿಗೆ ಅನಾನುಕೂಲ ಆಗುತ್ತಿತ್ತು. ಅಲ್ಲದೆ, ಪೊಲೀಸರು ಇದ್ದರೂ ಸೈರನ್ ಕೇಳಿಸದೆ ಗ್ರೀನ್ ಸಿಗ್ನಲ್ ಆನ್ ಮಾಡುವುದು ತಡವಾಗುತ್ತಿತ್ತು. ಹೊಸ ವ್ಯವಸ್ಥೆ ಜಾರಿ ಬಳಿಕ ಇವೆಲ್ಲ ತಾಪತ್ರಯ ತಪ್ಪಲಿದೆ.
ಯಾವುದಕ್ಕೆ ದಾರಿ ಬಿಡುವುದು?
ರಾಜಧಾನಿಯಲ್ಲಿ ಪ್ರತಿದಿನ 3 ಸಾವಿರ ಆಂಬುಲೆನ್ಸ್‌ಗಳು ಸಂಚಾರ ನಡೆಸುತ್ತಿವೆ. ಅಂದಾಜಿನ ಪ್ರಕಾರ, ದಿನಕ್ಕೆ 200 ಅಂಬುಲೆನ್ಸ್‌ಗಳಿಗೆ ಮಾತ್ರ ಹೊಸ ತಂತ್ರಜ್ಞಾನದಿಂದ ಸಿಗ್ನಲ್ ಫ್ರೀ ಮಾಡಲು ಸಾಧ್ಯ. ಉಳಿದ ಆಂಬುಲೆನ್ಸ್‌ಗಳಿಗೆ ಏನು ಮಾಡಬೇಕೆಂಬುದು ಪ್ರಶ್ನೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್, ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಅಲ್ಲದೇ ಸಿಗ್ನಲ್ನಲ್ಲಿ ಏಕಕಾಲಕ್ಕೆ 2 ಬದಿಯಲ್ಲಿ ಆಂಬುಲೆನ್ಸ್ಗಳು ಬಂದರೆ ಯಾವುದಕ್ಕೆ ಮೊದಲು ಆದ್ಯತೆ ಕೊಡಬೇಕೆಂಬುದು ಚರ್ಚೆ ನಡೆಯುತ್ತಿದೆ. ಎಷ್ಟು ಅಂಬುಲೆನ್ಸ್‌ಗಳಿಗೆ ಮತ್ತು ಯಾವ ಆಂಬುಲೆನ್ಸ್‌ಗಳಿಗೆ ಆದ್ಯತೆ ಕೊಡಬೇಕು ಎಂಬುದರ ಬಗ್ಗೆ ಮಾರ್ಗಸೂಚಿಯನ್ನು ಸಿದ್ಧಪಡಿಸುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗಿದೆ. ಅವರು ಕೊಡುವ ಮಾರ್ಗಸೂಚಿ ಆಧಾರದ ಮೇಲೆ ಸಿಗ್ನಲ್‌ಗಳೊಂದಿಗೆ ಆಂಬುಲೆನ್ಸ್ ಜಿಪಿಎಸ್ ಲಿಂಕ್ ಮಾಡಿ ಸಿಗ್ನಲ್ ಫ್ರೀ ಮಾಡಿಕೊಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಆಂಬುಲೆನ್ಸ್‌ಗಳಿಗೆ ಸಿಗ್ನಲ್ ಫ್ರೀ ತಂತ್ರಜ್ಞಾನ ಅಳವಡಿಸುವ ಬಗ್ಗೆ ಆರೋಗ್ಯ ಇಲಾಖೆಗೆ ಮಾರ್ಗಸೂಚಿ ಸಿದ್ಧಪಡಿಸುವಂತೆ ಕೋರಲಾಗಿದೆ. ವರದಿ ಬಂದ ಕೂಡಲೇ ಜಾರಿಗೆ ಬರಲಿದೆ.
ಎಂ.ಎನ್. ಅನುಚೇತ್, ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ)