

ಸಾಗರ: ಸ್ವಾರ್ಥವಿಲ್ಲದೆ ಮನುಷ್ಯ ಬದುಕನ್ನು ನಡೆಸಬೇಕು. ತ್ಯಾಗದಿಂದ ಮಾತ್ರ ಶ್ರೇಷ್ಠತೆ ಪಡೆಯಲು ಸಾಧ್ಯ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಸಾಗರದಲ್ಲಿ ಏರ್ಪಡಿಸಿರುವ ನವರಾತ್ರ ನಮಸ್ಯಾ ಕಾರ್ಯಕ್ರಮ ಲಲಿತೋಪಾಖ್ಯಾನ ಪ್ರವಚನದಲ್ಲಿ ಆಶೀರ್ವಚನ ನೀಡಿದ ಅವರು, ಸ್ವಾರ್ಥವಿಲ್ಲದೆ ನಮ್ಮಲ್ಲಿರುವ ಸಮಸ್ತವನ್ನು ಸಮರ್ಪಿಸುವ ಭಾವ ಇದ್ದಾಗ ದೇವರ ಒಲುಮೆ ಸಾಧ್ಯ. ದೇವರ ಒಲುಮೆ ಪಡೆಯಬೇಕಾದರೆ ನಾನು, ನನ್ನದು ಎನ್ನುವ ಮೋಹ ತ್ಯಜಿಸಬೇಕು ಎಂದರು.
ನಿತ್ಯ ಬೇರೆಬೇರೆ ರೀತಿಯ ವಸ್ತು ವಿಷಯ ಬಯಸುವುದು ಮನುಷ್ಯನ ಕ್ರಿಯೆ. ದೇವರು ನಾನಾ ಅವತಾರದಲ್ಲಿ ನಮಗೆ ದರ್ಶನದ ಭಾಗ್ಯ ನೀಡುತ್ತಾನೆ. ನಿಜವಾಗಿ ನಮಗೇನು ಬೇಕು ಎಂದು ಭಗವಂತನೇ ಅರಿತಿರುವಾಗ ಕೇಳುವ ಅಗತ್ಯ ಇರುವುದೇ ಇಲ್ಲ. ಹಾಗಾಗಿಯೇ ದೇವಿ ಅವತಾರವಾಗುವಾಗ ದೇವೇಂದ್ರ ತಾಯಿಗೆ ಶರಣಾಗಿ ಎಲ್ಲವೂ ತಿಳಿದಿರುವ ನೀನು ರಕ್ಷಿಸಬೇಕು ಎಂದು ಯಾಚಿಸಿದ. ಅದೇ ರೀತಿ ನಮ್ಮ ಬದುಕಿನಲ್ಲೂ ಎಲ್ಲ ತಿಳಿದಿರುವ ತಾಯಿಯಲ್ಲಿ ಮೊರೆ ಇಡಬೇಕು ಎಂದು ತಿಳಿಸಿದರು.
ಸಮಾಜ ಸಂಭ್ರಮದ ಅಂಗವಾಗಿ ವಿವಿಧ ಸಮಾಜದ ಅಧ್ಯಕ್ಷರಾದ ಸತೀಶ್ ಮೊಗವೀರ, ಶಿವಾನಂದ, ಸುಧೀರ್ ಶೆಟ್ಟಿ, ಗಣೇಶ್ ಅವರನ್ನು ಗೌರವಿಸಲಾಯಿತು. ಶ್ರೀಕ್ಷೇತ್ರ ವರದಹಳ್ಳಿ ಶ್ರೀಧರಾಶ್ರಮ ಮಂಡಳಿ ಅಧ್ಯಕ್ಷ ಎಂ.ಜಿ.ಕೃಷ್ಣಮೂರ್ತಿ ಅವರು ಮಂಡಳಿಗೆ ಕೊಡಮಾಡಿದ ಗೌರವ ಸ್ವೀಕರಿಸಿದರು.
ಹೊಸನಗರ ತಾಪಂ ಮಾಜಿ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ ಮತ್ತಿತರರು ಆಶೀರ್ವಾದ ಪಡೆದರು. ನವರಾತ್ರ ನಮಸ್ಯಾ ಮಾರ್ಗದರ್ಶಕ ಸಮಿತಿ ಅಧ್ಯಕ್ಷ ಗುರುಮೂರ್ತಿ ಹೆಗಡೆ, ಕಾರ್ಯದರ್ಶಿ ಪ್ರಸನ್ನ ಹೆಗಡೆ ಕೆರೆಕೈ, ಉತ್ಸವ ಖಂಡದ ಸಂಯೋಜಕ ತಿಮ್ಮಪ್ಪ, ಮಹಾಮಂಡಲದ ಪ್ರಧಾನ ರಮೇಶ್ ಹೆಗಡೆ ಗುಂಡೂಮನೆ, ಎಂ.ಜಿ.ರಾಮಚಂದ್ರ, ರಾಘವೇಂದ್ರ ಮಧ್ಯಸ್ಥ, ನಾರಾಯಣ ಖಂಡಿಕಾ, ಶ್ರೀನಾಥ ಇತರರಿದ್ದರು.