ಶ್ರೀಮಂತರಿಗೆ ಕಂದಾಯ ಭೂಮಿ ಮಂಜೂರು!

13 kls lokayukta
ಕಳಸದಲ್ಲಿ ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ಸಾರ್ವಜನಿಕರ ಅಹವಾಲಿ ಆಲಿಸಿದರು. ಅಧಿಕಾರಿಗಳಾದ ಮಲ್ಲಿಕಾರ್ಜುನ್, ನಿತ್ಯಾನಂದ, ಸುಧಾ ಇತರರಿದ್ದರು.
Published on

ಕಳಸ: ತಾಲೂಕಿನಲ್ಲಿ ಭೂಮಿ ಒತ್ತುವರಿ, ಭೂ ಅಕ್ರಮ ಮಂಜೂರು ಪ್ರಕರಣ, ಸರ್ಕಾರಿ ಆಸ್ಪತ್ರೆ ದುಸ್ಥಿತಿ ಸೇರಿ ವಿವಿಧ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದರು.

ಕಳಸ ತಾಲೂಕು ಕಚೇರಿಯಲ್ಲಿ ಬುಧವಾರ ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ಮತ್ತು ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಸಿಪಿಐ ಮುಖಂಡರಾದ ಗೋಪಾಲ ಶೆಟ್ಟಿ ಮತ್ತು ಲಕ್ಷ್ಮಣಾಚಾರ್ ಮಾತನಾಡಿ, ಸರ್ವೇ ನಂ.434ರಲ್ಲಿ ಶ್ರೀಮಂತ ವ್ಯಕ್ತಿಗೆ ಕಂದಾಯ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ. ಉಪವಿಭಾಗಾಧಿಕಾರಿ ಆದೇಶವಿದ್ದರೂ ತೆರವು ಮಾಡಿಸಲು ಸ್ಥಳೀಯ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು.
ಪಟ್ಟಣದ ಸರಹದ್ದಿನಲ್ಲೇ ಕಂದಾಯ ಭೂಮಿ ಒತ್ತುವರಿ ಮಾಡಿ ನೆಲ ಬಾಡಿಗೆಗೆ ನೀಡಿದ್ದರೂ ಕ್ರಮ ತೆಗೆದುಕೊಂಡಿಲ್ಲ. ಲಕ್ಷಾಂತರ ರೂ. ಬೆಲೆಬಾಳುವ ಕಂದಾಯ ಇಲಾಖೆಯ ಅನೇಕ ಜಮೀನುಗಳು ಒತ್ತುವರಿ ಆಗಿದ್ದರೂ ನಿರ್ಲಕ್ಷೃ ಮಾಡಲಾಗುತ್ತಿದೆ. ಕಳಸ ಮತ್ತು ಮೂಡಿಗೆರೆ ತಾಲೂಕಿನಲ್ಲಿ 400 ಎಕರೆ ಭೂಮಿ ಅಕ್ರಮ ಮಂಜೂರಾತಿ ಆಗಿದೆ. ಇದರಲ್ಲಿ 23 ಸರ್ಕಾರಿ ನೌಕರರು ಅಕ್ರಮವಾಗಿ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಸಿಪಿಐ ಮುಖಂಡ ಕೆಳಗೂರು ರಮೇಶ್ ದೂರು ಸಲ್ಲಿಸಿದರು.
ಕ್ಯಾತನಮಕ್ಕಿಯಲ್ಲಿರುವ ಒಂಟಿ ಮನೆ ಲಿಂಗಪ್ಪ ಮಾತನಾಡಿ, ನಾನು ಅಲ್ಲಿಂದ ಹೊರಬರಲು ಸಿದ್ಧನಿದ್ದೇನೆ. ನನಗೆ ನಿವೇಶನ ಕೊಡಿಸಿ ಎಂದು ಮನವಿ ಮಾಡಿದರು. ಕೃಷಿ ಯಂತ್ರೋಪಕರಣಗಳಿಗೆ ಈಗ ಸರ್ಕಾರದ ಸಬ್ಸಿಡಿ ಇಲ್ಲದಿದ್ದರೂ ಸಬ್ಸಿಡಿ ದರದಲ್ಲಿ ಉಪಕರಣ ಮಾರುತ್ತಿರುವುದಾಗಿ ಸಂಸ್ಥೆಯೊಂದು ಕಳಸದ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಡಿ.ರಾಮಮೂರ್ತಿ ದೂರಿದರು.
ಹೊನ್ನೆಕಾಡು ಯೋಜನೆ ತನಿಖೆಯಾಗಲಿ: ಕಳಸ ಪಟ್ಟಣಕ್ಕೆ ನೀರು ಪೂರೈಸುವ ಹೊನ್ನೆಕಾಡು ಯೋಜನೆ ಅನುಷ್ಠಾನದಲ್ಲಿ ಆಗಿರುವ ಲೋಪಗಳ ಬಗ್ಗೆ ತನಿಖೆ ನಡೆಸಬೇಕು. 7 ಕೋಟಿ ರೂ. ವೆಚ್ಚದ ಯೋಜನೆಯು ತಾಂತ್ರಿಕವಾಗಿ ವಿಲವಾಗಿದೆ. ನಿರೀಕ್ಷಿಸಿದಷ್ಟು ನೀರು ಕಳಸಕ್ಕೆ ಬಾರದೆ ಹಣ ಪೋಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಕಾಂಗ್ರೆಸ್ ಮುಖಂಡ ಶ್ರೇಣಿಕ್ ಒತ್ತಾಯಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಕಳಸ ಪಂಚಾಯಿತಿ ಸದಸ್ಯ ವೀರೇಂದ್ರ, ಹೊನ್ನೆಕಾಡು ಯೋಜನೆ ಈವರೆಗೂ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಆಗಿಲ್ಲ. ಈಗಲೂ ಲಕ್ಷಂತರ ರೂಪಾಯಿ ವೆಚ್ಚ ಮಾಡಿ ಜಿಲ್ಲಾ ಪಂಚಾಯಿತಿ ಇಂಜಿನಿಯರ್‌ಗಳೇ ನಿರ್ವಹಣೆ ಮಾಡಿಸುತ್ತಿದ್ದಾರೆ. ಇದರ ಹಿಂದಿರುವ ಗುಟ್ಟೇನು ಎಂದು ಪ್ರಶ್ನಿಸಿದರು.
ಎಕ್ಸ್-ರೇ ತಂತ್ರಜ್ಞೆ ವಿರುದ್ಧ ದೂರು: ಕಳಸ ಸರ್ಕಾರಿ ಆಸ್ಪತ್ರೆಯ ಎಕ್ಸ್-ರೇ ತಂತ್ರಜ್ಞೆ ಬಡ ರೋಗಿಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ವೀರೇಂದ್ರ ಮತ್ತು ರಿಜ್ವಾನ್ ಎಂಬುವರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್ಪಿ ತಿರುಮಲೇಶ್, ಕೆಲಸ ಮಾಡದ ಸಿಬ್ಬಂದಿಯನ್ನು ಇಲ್ಲೇಕೆ ಉಳಿಸಿಕೊಂಡಿದ್ದೀರಿ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮಧುಕುಮಾರ್ ಅವರನ್ನು ಪ್ರಶ್ನಿಸಿದರು. ಎಕ್ಸ್-ರೇ ಸಿಬ್ಬಂದಿ ಬಗ್ಗೆ ಅನೇಕ ದೂರುಗಳು ಬಂದಿವೆ. ಅವರ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಕಂದಾಯ ಇಲಾಖೆ ಸಿಬ್ಬಂದಿ ಸುಧಾ, ಲೋಕಾಯುಕ್ತ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ್, ಪಿಎಸ್‌ಐ ನಿತ್ಯಾನಂದ, ಸಿಬ್ಬಂದಿ ಲೋಕೇಶ್, ವಿಜಯಭಾಸ್ಕರ್, ಸವಿನಯ್, ರವಿಚಂದ್ರ, ಚಂದನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net