

ಬೆಂಗಳೂರು: ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಅಲೆದಾಟ ತಪ್ಪಿಸಲು ಹಂತಹಂತವಾಗಿ ಅನುಷ್ಠಾನ ಮಾಡುತ್ತಿರುವ ಗ್ರಾಮ ಒನ್ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಯಿಂದ ಅನುಷ್ಠಾನವಾಗುತ್ತಿರುವ ಯೋಜನೆಯನ್ನು ಎಲ್ಲ ಗ್ರಾಮಗಳಿಗೂ ವಿಸ್ತರಿಸಬೇಕೆಂದು ತೀರ್ವನಿಸಲಾಯಿತು.
ನಮ್ಮ ಸರ್ಕಾರ ಗ್ರಾಮೀಣ ಜನರಿಗೆ ಪಂಚಾಯಿತಿ ಹಂತದಲ್ಲಿಯೇ ನಾಗರಿಕ ಸೇವೆಗಳನ್ನು ಒದಗಿಸುವ ಗ್ರಾಮ ಒನ್ ಯೋಜನೆಯನ್ನು ಜಾರಿಗೊಳಿಸಿದೆ. ತಂತ್ರಜ್ಞಾನ ಆಧಾರಿತ ಈ ಕಾರ್ಯಕ್ರಮ ಹೆಚ್ಚು ಪಾರದರ್ಶಕ ಹಾಗೂ ಜನಸ್ನೇಹಿಯಾಗಿದೆ. ಜನರ ಅಲೆದಾಟ ತಪ್ಪಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಭಾಷಣದಲ್ಲಿ ಹೇಳಿಕೊಂಡಿದ್ದರು. ಇದರ ಹೊರತಾಗಿ ಗದಗ ಜಿಲ್ಲೆಯ ಶಿರಹಟ್ಟಿ ಮತ್ತು ಮುಂಡರಗಿ ತಾಲೂಕಿನ 29 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಜಾಲವಾಡಗಿ ಏತ ನೀರಾವರಿ ಯೋಜನೆಗೆ 197.50 ಕೋಟಿ ರೂ.ನ ಡಿಪಿಆರ್ಗೆ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿ ಮೂಲಸೌಕರ್ಯಗಳ ಅಭಿವೃದ್ಧಿ ಯೋಜನೆಗಳಿಗೆ ನೀಡಲಾಗುವ ಆರ್ಥಿಕ ಬೆಂಬಲ ನೀಡುವ ಕರ್ನಾಟಕ ವಯಬಿಲಿಟಿ ಗ್ಯಾಪ್ ಫಂಡಿಂಗ್ ಅಡಿ ಸಾಮಾಜಿಕ ವಲಯ ಯೋಜನೆಗಳಿಗೆ ನೀಡುವ ಸಹಾಯವನ್ನು ಒಟ್ಟು ಯೋಜನಾ ವೆಚ್ಚದ ಗರಿಷ್ಠ ಶೇ.30 ಕ್ಕೆ ಹೆಚ್ಚಿಸಲು ಸಂಪುಟ ಒಪ್ಪಿದೆ.
ಇ- ಆಸ್ಪತ್ರೆ ಅನುಷ್ಠಾನ: ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆಯನ್ನು ಸರ್ಕಾರ ರಾಜ್ಯದಲ್ಲಿ ವ್ಯಾಪಕವಾಗಿ ಅನುಷ್ಠಾನ ಮಾಡು ತ್ತಿದೆ. ಎಚ್ಎಂಐಎಸ್ (ಇ-ಆಸ್ಪತ್ರೆ) ತಂತ್ರಾಂಶವನ್ನು ಜಿಲ್ಲಾ ಮಟ್ಟದ 3 ಆಸ್ಪತ್ರೆಗಳು ಮತ್ತು 157 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅನುಷ್ಠಾನಗೊಳಿಸಲು ಅಗತ್ಯವಿರುವ ಐಸಿಟಿ ಸಲಕರಣೆ ಮತ್ತು 9 ಜಿಲ್ಲಾ ಆಸ್ಪತ್ರೆ ಹಾಗೂ 143 ತಾಲ್ಲೂಕು ಆಸ್ಪತ್ರೆಗಳಿಗೆ 701 ಡೆಸ್ಕ್ಟಾಪ್ ಕಂಪ್ಯೂಟರ್ಗಳನ್ನು 28.55 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಅನುಮೋದನೆ ನೀಡಲಾಗಿದೆ. ಎಚ್ಎಂಐಎಸ್ ಎನ್ನುವುದು ಆರೋಗ್ಯ ಸೌಲಭ್ಯಗಳು ಮತ್ತು ಆರೋಗ್ಯ ಸಂಸ್ಥೆಗಳಲ್ಲಿನ ನಿರ್ವಹಣೆ ಮತ್ತು ನಿರ್ಧಾರ ತೆಗೆದುಕೊಳ್ಳಲು ಸಹಕಾರ ನೀಡುವ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಿದ ಡೇಟಾ ಸಂಗ್ರಹಣಾ ವ್ಯವಸ್ಥೆಯಾಗಿದೆ.
ಹುಲಿ ಸಂರಕ್ಷಿತ ಪ್ರದೇಶ: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮವನ್ನು ಮಲೆ ಮಹದೇಶ್ವರ ಹುಲಿ ಸಂರಕ್ಷಿತ ಪ್ರದೇಶವೆಂದು ಘೊಷಣೆ ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ.