

ವಿಜಯನಗರ: ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವುದು ಗಾದೆ ಮಾತು. ಆದರೆ ಇಲ್ಲೊಂದು ಪ್ರಕರಣದಲ್ಲಿ ಗಂಡ-ಹೆಂಡಿರ ಜಗಳ ಕೊಚ್ಚಿ-ಚುಚ್ಚಿಕೊಳ್ಳುವ ತನಕ ಎಂಬಂತಾಗಿದೆ. ಇಂಥದ್ದೊಂದು ಪ್ರಕರಣ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
ಪತ್ನಿ ಶಾಂತಮ್ಮ (45) ಸಾವಿಗೀಡಾದರೆ ಪತಿ ದೊಡ್ಡಹೊನ್ಮೂರಪ್ಪ ಪರಿಸ್ಥಿತಿ ಗಂಭೀರವಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ನಾಗೇನಹಳ್ಳಿಯಲ್ಲಿ ನೆಲೆಸಿರುವ ಈ ದಂಪತಿಯ ಕೌಟುಂಬಿಕ ಕಲಹ ಹೀಗೆ ದುರಂತ ಅಂತ್ಯ ಕಂಡಿದೆ.
ಪತಿ-ಪತ್ನಿ ಇಬ್ಬರೂ ಸುಮಾರು ಅರ್ಧಗಂಟೆ ಜಗಳವಾಡಿದ್ದು, ಬಳಿಕ ಪರಿಸ್ಥಿತಿ ವಿಕೋಪಕ್ಕೆ ತೆರಳಿ ಪತ್ನಿಯನ್ನು ಪತಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಆತ ತಾನೂ ಚಾಕು ಚುಚ್ಚಿಕೊಂಡಿದ್ದರಿಂಗ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾನೆ.
ಕೊಲೆ ಮಾಡಿರುವ ಆರೋಪಿ, ಪತಿ ಹೊನ್ಮೂರಪ್ಪಗೆ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಸಪೇಟೆಯ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.