ಆಕೆಯ ಮೇಲೆ ಹಲ್ಲೆ ಮಾಡಿ ಜುಟ್ಟು ಹಿಡಿದು ಎಳೆದಾಡಿದ!; ವಿಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿ ಪರಾರಿ..

Assault
Published on

ಚಿಕ್ಕಬಳ್ಳಾಪುರ: ಆತ ಆಕೆ ಮೇಲೆ ಹಲ್ಲೆ ಮಾಡಿದ್ದಲ್ಲದೆ ಜುಟ್ಟು ಹಿಡಿದು ಎಳೆದಾಡಿದ್ದಾನೆ. ಅಷ್ಟೇ ಅಲ್ಲ, ಆ ಕುರಿತ ವಿಡಿಯೋ ವೈರಲ್ ಆಗುತ್ತಿದ್ದಂತೆ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ. ಹೀಗೊಂದು ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

ವೆಂಕಟಲಕ್ಷ್ಮಮ್ಮ ಹಲ್ಲೆಗೊಳಗಾದ ಮಹಿಳೆ. ಡ್ರೈವರ್​ ಗೋಪಾಲ್ ಎಂಬಾತ ಹಲ್ಲೆ ಮಾಡಿ ಪರಾರಿಯಾಗಿರುವ ಆರೋಪಿ. ವೆಂಕಟಲಕ್ಷ್ಮಮ್ಮ ಮತ್ತು ಚೈತ್ರಾ ಎಂಬಾಕೆಯ ನಡುವೆ ನಡೆದ ಗಲಾಟೆಯ ಕಾರಣದಿಂದಾಗಿ ಈ ಹಲ್ಲೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಓಂಟೂರು ಗ್ರಾಮದಲ್ಲಿ ವೆಂಕಟಲಕ್ಷ್ಮಮ್ಮ ಹಾಗೂ ಚೈತ್ರ ಎಂಬಾಕೆ ನಡುವೆ ಗಲಾಟೆ ನಡೆದಿತ್ತು. ಗಲಾಟೆ ಬಳಿಕ ಗ್ರಾಮದ ಮುಖಂಡರ ನೇತೃತ್ವದಲ್ಲಿ ರಾಜಿಯೂ ನಡೆದಿತ್ತು.

ಅದಾಗ್ಯೂ ಗೋಪಾಲ್​ ತನ್ನ ಪುತ್ರಿ ಚೈತ್ರಾ ಜತೆ ಗಲಾಟೆ ಮಾಡಿದ್ದ ವೆಂಕಟಲಕ್ಷ್ಮಮ್ಮಗೆ ಫೋನ್ ಮಾಡಿ ದಬಾಯಿಸಿದ್ದಲ್ಲದೆ, ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಆಕೆಯ ಜುಟ್ಟು ಹಿಡಿದು ಎಳೆದಾಡಿದ್ದಾನೆ. ಒಂದು ವಾರದ ಹಿಂದೆ ನಡೆದಿರುವ ಈ ಪ್ರಕರಣದ ವಿಡಿಯೋ ವೈರಲ್​ ಆಗಿದ್ದು, ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಖಲಾಗಿರುವ ದೂರಿನ ಮೇರೆಗೆ ತನಿಖೆಗೆ ಇಳಿದಿರುವ ಪೊಲೀಸರು ಗೋಪಾಲ್ ಸಹೋದರನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕುರಿತು ಎಸ್​ಐ ಪಾಪಣ್ಣ ತನಿಖೆ ಮುಂದುವರಿಸಿದ್ದು, ಗೋಪಾಲ್ ಪತ್ತೆಗೆ ಬಲೆ ಬೀಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net