

ತೀರ್ಥಹಳ್ಳಿ: ಮೇಲಿನಕುರುವಳ್ಳಿ ಗ್ರಾಪಂ ಭಾಗ-2ಕ್ಕೆ ಮತದಾನ ನಡೆದ ಮತಗಟ್ಟೆಯಲ್ಲಿ ವಾಮಾಚಾರ ನಡೆಸಿದ ಕುರುಹುಗಳು ದೊರೆತಿದ್ದು ಈ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ಎದುರಾಳಿಗಳನ್ನು ಭಯಪಡಿಸಲು ವಾಮಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ತಹಸೀಲ್ದಾರ್ಎಸ್.ಬಿ.ಶ್ರೀಪಾಸ್ ಅವರಿಗೆ ಇದೇ ಕ್ಷೇತ್ರದ ಅಭ್ಯರ್ಥಿಗಳಾದ ಮುತ್ತುಗುಂಡಿ ಆದರ್ಶ, ಅಣ್ಣಪ್ಪ ಹಾಗೂ ದೇವರಾಜ್ ಎಂಬುವವರು ದೂರು ನೀಡಿದ್ದಾರೆ.
ಮತಗಟ್ಟೆ ಬಾಗಿಲಿನ ಬಳಿ ಕುಂಕುಮ, ಹೂವು ಮತ್ತು ಲಿಂಬೆಹಣ್ಣು ಇಟ್ಟಿದ್ದ ಕಾಗದದ ಪೊಟ್ಟಣ ದೊರೆತಿದೆ. ಇದರೊಂದಿಗೆ ಅನಾನಸ್, ಆಟೋರಿಕ್ಷಾ ಹಾಗೂ ಟೆಲಿಫೋನ್ ಚಿಹ್ನೆ ಇರುವ ಕರಪತ್ರವೂ ಇತ್ತು. ಈ ಕ್ಷೇತ್ರದಿಂದ ಆಟೋರಿಕ್ಷಾ ಚಿಹ್ನೆಯಡಿ ಸ್ಪರ್ಧಿಸಿರá-ವ ಅಭ್ಯರ್ಥಿ ಯು.ಡಿ.ವೆಂಕಟೇಶ್ ವಾಮಾಚಾರ ಮಾಡಿದ್ದಾರೆ. ಸದರಿ ಅಭ್ಯರ್ಥಿ ಕಾನೂನು ಮೀರಿ ಮತದಾನದ ಹಿಂದಿನ ದಿನದ ರಾತ್ರಿ ಮತದಾನ ಕೇಂದ್ರವನ್ನು ಪ್ರವೇಶಿಸಿದ್ದಾರೆ. ತನ್ನ ಎದುರಾಳಿಗಳನ್ನು ವಾಮಾಚಾರದ ಮೂಲಕ ಭಯಪಡಿಸಲು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಸದರಿ ಅಭ್ಯರ್ಥಿ ಹಾಗೂ ವಾಮಾಚಾರಕ್ಕೆ ಅವಕಾಶ ಮಾಡಿಕೊಟ್ಟಿರುವ ಪಿಡಿಒ, ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿ ವಿರುದ್ದವೂ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.