ಮದುವೆಯಾಗಿ 3 ವರ್ಷವಾದರೂ ಹೆಂಡತಿ ಗರ್ಭವತಿ ಆಗಲಿಲ್ಲವೆಂದೇ ಬೇಸರಗೊಂಡ ಗಂಡ ಹೀಗಾ ಮಾಡೋದು?!

murder
Published on

ಲಖನೌ: ಮದುವೆಯಾಗಿ ಮೂರು ವರ್ಷಗಳಾದರೂ ಹೆಂಡತಿ ಮಡಿಲು ತುಂಬಿಸಿಕೊಳ್ಳಲಿಲ್ಲ, ಮಗುವನ್ನು ಹೆರಲಿಲ್ಲ ಎನ್ನುವ ಕಾರಣಕ್ಕೆ ಗಂಡನೇ ಆಕೆಯನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಹಿಳೆಗೆ ಆತ ವರದಕ್ಷಿಣೆ ಕಿರುಕುಳವನ್ನೂ ನೀಡುತ್ತಿದ್ದ ಎನ್ನಲಾಗಿದೆ.

ಪ್ರೀತಿ ಹೆಸರಿನ ಯುವತಿಯನ್ನು ಮೂರು ವರ್ಷಗಳ ಹಿಂದೆ ಉತ್ತರ ಪ್ರದೇಶದ ಬಿಜ್ನೋರ್​ನ ಮುಕಾರ್ಪುರಿ ಗ್ರಾಮದ ನಿವಾಸಿ ರೋಹಿತ್​ ಕುಮಾರ್​ಗೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯ ಸಮಯದಲ್ಲಿ ಪ್ರೀತಿಯ ತಂದೆ ತಾಯಿ, ವರನ ಕುಟುಂಬಕ್ಕೆ ತಮ್ಮ ಕೈಲಾದಷ್ಟು ವರದಕ್ಷಿಣೆ ನೀಡಿದ್ದರು. ಆದರೆ ಅದು ಸಾಕಾಗಿಲ್ಲ ಎಂದು ವರನ ಕುಟುಂಬ ಮದುವೆಯಾದ ಮೇಲೆ ಪ್ರೀತಿಗೆ ಹಿಂಸೆ ನೀಡಲು ಆರಂಭಿಸಿದೆ. ಆಗಾಗ ಆಕೆಯ ಮೇಲೆ ಹಲ್ಲೆ ಮಾಡಿರುವುದಾಗಿಯೂ ಹೇಳಲಾಗಿದೆ.

ಮದುವೆಯಾಗಿ ಮೂರು ವರ್ಷಗಳಾದರೂ ಪ್ರೀತಿಗೆ ಗರ್ಭ ನಿಂತಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ರೋಹಿತ್​ ಆಕೆಯ ಕೊಲೆ ಮಾಡಿದ್ದಾನೆ. ಇದಕ್ಕೆ ಆತನ ತಂದೆ ತಾಯಿಯೂ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಪ್ರೀತಿಯ ತಂದೆ ತಾಯಿ, ಅಳಿಯನ ಮನೆಗೆ ಹೋದಾಗ, ಮಗಳ ದೇಹ ಕೋಣೆಯ ಬೆಡ್​ನ ಮೇಲಿತ್ತು. ಆಕೆಯ ಕುತ್ತಿಗೆಯಲ್ಲಿ ಹಗ್ಗವಿದ್ದು, ಇದನ್ನು ಆತ್ಮಹತ್ಯೆ ಎಂದು ನಂಬಿಸುವ ಸಲುವಾಗಿ ಹಗ್ಗದ ಇನ್ನೊಂದು ತುದಿಯನ್ನು ಫ್ಯಾನ್​ಗೆ ಕಟ್ಟಲಾಗಿತ್ತು ಎನ್ನಲಾಗಿದೆ. ಮಗಳದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ಮಹಿಳೆಯ ಕುಟುಂಬ ದೂರು ನೀಡಿದ್ದು, ಇದೀಗ ಆಕೆಯ ಗಂಡನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net