

ನವದೆಹಲಿ: ಪ್ರೀತಿಯಿಂದ ಸಾಕಿದ್ದ ಅಜ್ಜಿಯ ತಲೆಯನ್ನು ಮೊಮ್ಮಗನೇ ಸುತ್ತಿಗೆಯಿಂದ ಜಜ್ಜಿ ಕೊಂದಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ರೋಹ್ತಾಶ್ ನಗರದಲ್ಲಿ 73 ವರ್ಷದ ಸತೀಶ್ ಕುಮಾರಿ ವಾಸವಿದ್ದರು. ಒಂದೇ ಬಿಲ್ಡಿಂಗ್ನಲ್ಲಿ ಗ್ರೌಂಡ್ ಫ್ಲೋರ್ನಲ್ಲಿ ತಾಯಿ ವಾಸವಿದ್ದರೆ, ಆಕೆಯ ಮೊದಲನೇ ಮಗ ಎರಡನೇ ಮಹಡಿಯಲ್ಲಿ ವಾಸಿಸುತ್ತಿದ್ದರು. ಡಿಸೆಂಬರ್ 26ರಂದು ಬೆಳಗ್ಗೆ ಮನೆಯಿಂದ ಕೆಳಗಿಳಿದ ಮಗ ಅಮ್ಮನಿಗಾಗಿ ಹುಡುಕಾಡಿದ್ದಾನೆ. ಆದರೆ ಆಕೆಯಿದ್ದ ಮನೆಗೆ ಹೊರಗಿನಿಂದ ಬೀಗ ಹಾಕಿರುವುದು ಕಂಡುಬಂದಿದೆ. ಈ ರೀತಿ ಅಮ್ಮ ತನಗೆ ಹೇಳದೆಯೆ ಎಲ್ಲೂ ಹೋಗುವುದಿಲ್ಲ ಎಂದು ಅನುಮಾನ ಬಂದ ಮಗ ತನ್ನ ತಮ್ಮನನ್ನೂ ಮನೆಗೆ ಕರೆಸಿದ್ದಾನೆ. ಇಬ್ಬರೂ ಸೇರಿ ಮನೆ ಬಾಗಿಲು ಒಡೆದು ನೋಡಿದ್ದಾರೆ. ಆಗ ಮನೆಯ ಕೋಣೆಯ ಖುರ್ಚಿಯ ಮೇಲೆ ತಾಯಿ ರಕ್ತದ ಮಡುವಿನಲ್ಲಿ ಕುಳಿತಿರುವುದು ಕಂಡು ಬಂದಿದೆ. ತಕ್ಷಣ ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದೆ.
ಅದೇ ಬಿಲ್ಡಿಂಗ್ನಲ್ಲಿ ವಾಸವಿದ್ದ ಆಕೆಯ 19 ವರ್ಷದ ಮೊಮ್ಮಗ ಶನಿವಾರದಂದು ಅಜ್ಜಿಯ ಬಳಿ ಹಣ ಕೊಡಲು ಕೇಳಿದ್ದಾನೆ. ಅದಕ್ಕೆ ಆಕೆ ಒಪ್ಪದಿದ್ದಾಗ ಆಕೆಯ ತಲೆಯನ್ನು ಸುತ್ತಿಗೆಯಿಂದ ಜಜ್ಜಿ, ಅಲ್ಲಿದ್ದ 18 ಸಾವಿರ ರೂಪಾಯಿ ಹಣವನ್ನು ದೋಚಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆತನ ಬಗ್ಗೆ ಅನುಮಾನ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ನಡೆದ ವಿಚಾರ ತಿಳಿದುಬಂದಿದೆ. ಸಾಲ ಮಾಡಿಕೊಂಡಿದ್ದ ಆತ ಅದನ್ನು ತೀರಿಸುವ ಸಲುವಾಗಿ ಈ ರೀತಿ ಮಾಡಿದ್ದಾಗಿ ಹೇಳಲಾಗಿದೆ. (ಏಜೆನ್ಸೀಸ್)