ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರಾವಧಿ 5 ವರ್ಷವಲ್ಲ! ಮತ್ತೆಷ್ಟು ಗೊತ್ತಾ?

GP-Election-1
Published on

ಬೆಂಗಳೂರು: ಗ್ರಾಮ ಪಂಚಾಯಿತಿ ಗಾದಿ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿತರೇ ಗಮನಿಸಿ. ಈ ಬಾರಿ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರಾವಧಿ 5 ವರ್ಷ ಇರಲ್ಲ!

ಹೀಗಂತ ರಾಜ್ಯ ಚುನಾವಣಾ ಆಯೋಗವೇ ಹೊರಡಿಸಿರುವ ಕರ್ನಾಟಕ ರಾಜ್ಯಪತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. 2015ರಲ್ಲಿ ಗ್ರಾಪಂ‌ ಅಧ್ಯಕ್ಷ- ಉಪಾಧ್ಯಕ್ಷರ ಅಧಿಕಾರಾವಧಿಯನ್ನು 5 ವರ್ಷಕ್ಕೆ ನಿಗದಿ ಪಡಿಸಲಾಗಿತ್ತು. 2020ನೇ ಸಾಲಿನ ಗ್ರಾಪಂ ಚುನಾವಣೆ ಮುಗಿದ ಬಳಿ ಈ ಅವಧಿಯನ್ನು ಮೊಟಕುಗೊಳಿಸಲಾಗಿದೆ.

ಅಂದರೆ ಈ ಬಾರಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರನ್ನು ಎರಡೂವರೆ ವರ್ಷಕ್ಕೆ ಮಾತ್ರವೇ ಆಯ್ಕೆ ಮಾಡಲಾಗುತ್ತದೆ. ಒಟ್ಟು 5 ವರ್ಷದಲ್ಲಿ ಮೊದಲ 30 ತಿಂಗಳ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಆಯಾ ಜಿಲ್ಲಾಧಿಕಾರಿಗಳು ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮೀಸಲಾತಿ ಮಾರ್ಗಸೂಚಿಯಂತೆ ಮೀಸಲಾತಿ ನಿಗದಿ ಮಾಡಬೇಕು. ಅದರಂತೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇದನ್ನೂ ಓದಿರಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಮಾರ್ಗಸೂಚಿ ಪ್ರಕಟ: ಇಲ್ಲಿದೆ ಪೂರ್ಣ ಪಟ್ಟಿ

ತದನಂತರ ಇನ್ನುಳಿದ ಎರಡೂವರೆ ವರ್ಷಕ್ಕೆ 2ನೇ ಹಂತದಲ್ಲಿ ಮತ್ತೊಂದು ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನ ಆಯ್ಕೆ ಮಾಡಲಾಗುತ್ತದೆ. ಈ ಬದಲಾವಣೆ 5 ವರ್ಷ ಕಾಲ ಒಬ್ಬರೇ ಗ್ರಾಪಂ ಆಡಳಿತದ ಚುಕ್ಕಾಣಿ ಹಿಡಿಯುವ ಕನಸು ಕಂಡಿದ್ದವರಿಗೆ ನಿರಾಶೆ ಮೂಡಿಸಿದೆ.

ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಸಂಖ್ಯೆಯ ಸರಿ ಸುಮಾರು‌ 1/3ರ ಹುದ್ದೆಗಳನ್ನು ಹಿಂದುಳಿದ ವರ್ಗದವರಿಗೆ ಮೀಸಲಿಡತಕ್ಕದ್ದು ಎಂದು ಕೂಡ ರಾಜ್ಯ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net