ಡಿಸೆಂಬರ್​ಗೆ ಜಿಪಿಎಸ್ ಕಡ್ಡಾಯ: ಸಾರ್ವಜನಿಕ ಸೇವೆಯ ಖಾಸಗಿ ಬಸ್, ಟ್ಯಾಕ್ಸಿ, ಗೂಡ್ಸ್ ವಾಹನಗಳಿಗೆ ಅನ್ವಯ

GPS
Published on

| ಕೀರ್ತಿನಾರಾಯಣ ಸಿ. ಬೆಂಗಳೂರು 
ರಾಜ್ಯದಲ್ಲಿ ಮಹಿಳೆಯರು, ಮಕ್ಕಳು ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಇನ್ನು ಮುಂದೆ ಎಲ್ಲ ರೀತಿಯ ಸಾರ್ವಜನಿಕ ಸೇವಾವಾಹನಗಳಲ್ಲಿ ಜಿಪಿಎಸ್ ಟ್ರಾ್ಯಕಿಂಗ್ ಹಾಗೂ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸುತ್ತಿದ್ದು, ಡಿಸೆಂಬರ್​ನಿಂದ ಈ ಯೋಜನೆ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ. ಯೆಲ್ಲೋ ಬೋರ್ಡ್​ನ ಟ್ಯಾಕ್ಸಿಗಳು, ಕ್ಯಾಬ್​ಗಳು, ಖಾಸಗಿ ಬಸ್​ಗಳು, ನ್ಯಾಷನಲ್ ಪರ್ವಿುಟ್ ಹೊಂದಿರುವ ಗೂಡ್ಸ್ ವಾಹನಗಳಲ್ಲಿ ಪ್ಯಾನಿಕ್ ಬಟನ್ ಒಳಗೊಂಡ ವೆಹಿಕಲ್ ಲೊಕೇಷನ್ ಟ್ರಾ್ಯಕಿಂಗ್ (ವಿಎಲ್​ಟಿ) ಡಿವೈಸ್ ಅಳವಡಿಕೆಯಾಗಲಿದೆ.

ವಾಹನಗಳಲ್ಲಿ ವಿಎಲ್​ಟಿ ಡಿವೈಸ್​ಗಳನ್ನು ಅಳವಡಿಸುವ ಗುತ್ತಿಗೆ ನೀಡಲು ಸಾರಿಗೆ ಇಲಾಖೆ 2023 ಫೆ.9ರಂದು ಇ-ಟೆಂಡರ್ ಮೂಲಕ ಕಂಪನಿಗಳಿಂದ ಅರ್ಜಿ ಆಹ್ವಾನಿಸಿತ್ತು. ಈಗ ಅರ್ಹತೆ ಹೊಂದಿರುವ 13 ಕಂಪನಿಗಳು ಆಯ್ಕೆಯಾಗಿವೆ. ಈ ಕಂಪನಿಗಳು ಎಐಎಸ್ 140 ಪ್ರಮಾಣೀಕೃತ ವೆಹಿಕಲ್ ಲೋಕೇಷನ್ ಟ್ರಾ್ಯಕಿಂಗ್ ಡಿವೈಸ್ ಅಳವಡಿಸಲಿವೆ. ಯೋಜನೆ ಜಾರಿಗೊಳಿಸಲು ಅನುಮತಿ ಕೋರಿ ಸಾರಿಗೆ ಇಲಾಖೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಹಸಿರು ನಿಶಾನೆ ಸಿಕ್ಕ ಕೂಡಲೇ ಜಾರಿಯಾಗಲಿದೆ.

ಚಲಿಸುವ ಬಸ್​ನಲ್ಲಿ 23 ವರ್ಷದ ವಿದ್ಯಾರ್ಥಿನಿ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿದ ನಿರ್ಭಯಾ ಪ್ರಕರಣದ ನಂತರ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಎಲ್ಲ ಸಾರ್ವಜನಿಕ ಸೇವಾ ವಾಹನಗಳಲ್ಲಿ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ ಎಂದು 2016ರ ನವೆಂಬರ್​ನಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಈ ನಿಯಮ 2018 ಏಪ್ರಿಲ್​ನಿಂದ ದೇಶದಲ್ಲಿ ಜಾರಿಗೆ ಬಂದಿದೆ. ನವದೆಹಲಿ, ಮಹಾರಾಷ್ಟ್ರ, ಉತ್ತರಾಖಂಡ, ಛತ್ತೀಸ್​ಗಡ, ಹಿಮಾಚಲಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಜಾರಿಯಾಗಿದೆ. ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ಬಂದಿರಲಿಲ್ಲ. ಹಂತಹಂತವಾಗಿ ಎಲ್ಲ ರಾಜ್ಯಗಳು ಯೋಜನೆ ಅನುಷ್ಠಾನಕ್ಕೆ ತರಲು ಆಸಕ್ತಿ ತೋರುತ್ತಿವೆ.

ಸರ್ಕಾರದಿಂದಲೇ ರೇಟ್ ಫಿಕ್ಸ್!

ಕೇರಳ ಸೇರಿ ಕೆಲ ರಾಜ್ಯಗಳಲ್ಲಿ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಅನ್ನು ಅಳವಡಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಮನಸೋಇಚ್ಛೆ ದರ ವಸೂಲಿ ಮಾಡಲಾಗುತ್ತದೆ. ಒಂದು ವಾಹನಕ್ಕೆ 13 ರಿಂದ 14 ಸಾವಿರ ರೂ.ವರೆಗೆ ಪಡೆಯಲಾಗುತ್ತಿದೆ. ಕರ್ನಾಟಕದಲ್ಲಿ ಟೆಂಡರ್ ಆಹ್ವಾನಿಸಿ, ನಿರ್ದಿಷ್ಟ ಕಂಪನಿಗಳಿಗೆ ಮಾತ್ರವೇ ಡಿವೈಸ್ ಅಳವಡಿಕೆ ಜವಾಬ್ದಾರಿ ನೀಡಲಾಗುತ್ತಿದೆ. ಈಗ ಬೇರೆ ರಾಜ್ಯಗಳು ಸಹ ನಮ್ಮಂತೆ ಮಾಡಬೇಕಾಗಿತ್ತು ಎಂದು ಆಲೋಚಿಸುತ್ತಿವೆ. ಸರ್ಕಾರವೇ ದರ ನಿಗದಿಪಡಿಸಲು ತೀರ್ವನಿಸಿದ್ದು, ಉತ್ತಮ ಗುಣಮಟ್ಟದ ಡಿವೈಸ್​ಗೆ 9 ಸಾವಿರ ರೂ.ವರೆಗೆ ನಿಗದಿಪಡಿಸುವ ಅಂದಾಜಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡಿವೈಸ್ ಅಳವಡಿಕೆ ಹೇಗೆ?

  • - ಟೆಂಡರ್ ಪಡೆದ ಕಂಪನಿಗಳ ಮೂಲಕವೇ ವಾಹನ ಮಾಲೀಕರು ಡಿವೈಸ್​ಗಳನ್ನು ಅಳವಡಿಸಿಕೊಳ್ಳಬೇಕು.
  • - ಸಾರಿಗೆ ಇಲಾಖೆಯೇ ದರ ನಿಗದಿಪಡಿಸುವುದರಿಂದ ಕಂಪನಿಗಳು ಹೆಚ್ಚು ವಸೂಲಿಗೆ ಅವಕಾಶ ಇರುವುದಿಲ್ಲ.

ಕೇಂದ್ರ ಸರ್ಕಾರದ ಸೂಚನೆ ಅನ್ವಯ ಸಾರ್ವಜನಿಕ ಸೇವಾ ವಾಹನಗಳಲ್ಲಿ ಕಡ್ಡಾಯವಾಗಿ ವೆಹಿಕಲ್ ಲೊಕೇಷನ್ ಟ್ರಾ್ಯಕಿಂಗ್ ಡಿವೈಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಬೇಕು. ಈ ಡಿವೈಸ್​ಗಳನ್ನು ಅಳವಡಿಸುವ ಜವಾಬ್ದಾರಿಯನ್ನು ಈಗಾಗಲೇ ಟೆಂಡರ್ ಮೂಲಕ 13 ಕಂಪನಿಗಳಿಗೆ ಕೊಡಲಾಗಿದೆ. ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದು, ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲಾಗುತ್ತದೆ. | ಬಿ.ಪಿ.ಉಮಾಶಂಕರ, ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ (ಆಡಳಿತ)

ಬೆಂಗ್ಳೂರಲ್ಲಿ ಕಮಾಂಡ್ ಸೆಂಟರ್: ನಿರ್ಭಯಾ ನಿಧಿಯಡಿ ಬೆಂಗಳೂರಿನ ಶಾಂತಿನಗರ ದಲ್ಲಿರುವ ಸಾರಿಗೆ ಇಲಾಖೆ ಪ್ರಧಾನ ಕಚೇರಿಯಲ್ಲಿ ಕಮಾಂಡ್ ಸೆಂಟರ್ ಸ್ಥಾಪನೆಯಾಗಲಿದೆ. ಎಲ್ಲ ಸಾರ್ವಜನಿಕ ಸೇವಾ ವಾಹನಗಳಲ್ಲಿ ಅಳವಡಿಸುವ ಡಿವೈಸ್​ಗಳಿಂದ ಕಮಾಂಡ್ ಸೆಂಟರ್​ನಿಂದಲೇ ನಿಗಾ ವಹಿಸಲಿದ್ದಾರೆ. ಸಾರಿಗೆ, ಪೊಲೀಸ್ ಸೇರಿ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರ ನೆರವಿಗೆ ಧಾವಿಸುವ ಯೋಜನೆ ರೂಪಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಅಪರಾಧಗಳ ನಿಯಂತ್ರಣಕ್ಕೆ ವಿಎಲ್​ಟಿ ವ್ಯವಸ್ಥೆ ತುಂಬಾ ಉಪಯುಕ್ತವಾಗಲಿದೆ.

ಟೆಂಡರ್ ಮೂಲಕ 13 ಕಂಪನಿಗಳು ಅಂತಿಮ

  • ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್, ಪ್ಯಾನಿಕ್ ಬಟನ್ ಕಡ್ಡಾಯ
  • ಬೆಂಗಳೂರಲ್ಲಿ ಸಾರಿಗೆ ಇಲಾಖೆ ಕಚೇರಿಯಲ್ಲಿ ಕಮಾಂಡ್ ಸೆಂಟರ್

ಅನುಕೂಲವೇನು?

  • ಸಂಭವನೀಯ ಅಪರಾಧ ನಿಯಂತ್ರಣ ಸಾಧ್ಯ
  • ಮಹಿಳೆಯರು, ಮಕ್ಕಳು, ಪ್ರಯಾಣಿಕರಿಗೆ ರಕ್ಷಣೆ
  • ಕಳ್ಳತನದಂತಹ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಸುಲಭ
  • ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳ ತಡೆ

ಕಾರ್ಯನಿರ್ವಹಣೆ ಹೇಗೆ?

  • ಜಿಐಎಸ್ ಮಾನಿಟರಿಂಗ್ ನಕ್ಷೆಯಲ್ಲಿ ವಾಹನಗಳ ನೈಜ-ಸಮಯದ ಟ್ರಾ್ಯಕಿಂಗ್ ಮಾಡಲಾಗುತ್ತದೆ.
  • ವಾಹನ ಎಲ್ಲಿದೆ? ಯಾವ ಮಾರ್ಗದಲ್ಲಿ ಪ್ರಯಾಣಿಸುತ್ತಿದೆ? ಮಾರ್ಗ ಬದಲಾವಣೆ? ಸೇರಿ ಎಲ್ಲ ಮಾಹಿತಿ ಲಭ್ಯ.
  • ಅತಿ ವೇಗ, ನಿರ್ಬಂಧಿತ ಪ್ರದೇಶ, ಸಂಚಾರ ನಿಯಮಗಳ ಉಲ್ಲಂಘನೆ ಸಂಬಂಧ ಎಚ್ಚರಿಕೆ ಕೊಡಲಿದೆ.
  • ವಾಹನದಲ್ಲಿರುವ ಪ್ರಯಾಣಿಕರಿಗೆ ತುರ್ತು ಪರಿಸ್ಥಿತಿ ಎದುರಾದಲ್ಲಿ ಪ್ಯಾನಿಕ್ ಬಟನ್ ಒತ್ತಿದರೆ ಕಮಾಂಡ್ ಸೆಂಟರ್​ಗೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ.
  • ಕಮಾಂಡ್ ಸೆಂಟರ್ ತಕ್ಷಣ ಸ್ಪಂದಿಸಲಿದ್ದು, ಸ್ಥಳೀಯ ಪೊಲೀಸರಿಗೂ ತಿಳಿಸಿ, ನೆರವಿಗೆ ಧಾವಿಸುವಂತೆ ಸೂಚಿಸಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net