

| ಕೀರ್ತಿನಾರಾಯಣ ಸಿ. ಬೆಂಗಳೂರು
ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಗೆ ತತ್ತರಿಸಿ ‘ಎಲೆಕ್ಟ್ರಿಕ್ ವಾಹನ’ಗಳತ್ತ ಚಿತ್ತ ಹರಿಸಿದ ಜನರಿಗೆ ರಸ್ತೆ ತೆರಿಗೆ ಭಾರ ಹೊರೆಸುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಮುಂದಾದ ಸಾರಿಗೆ ಇಲಾಖೆ ನಿರ್ಧಾರಕ್ಕೆ ರಾಜ್ಯ ಸರ್ಕಾರ ‘ರೆಡ್ ಸಿಗ್ನಲ್’ ಕೊಟ್ಟಿದೆ. ಇ- ವಾಹನಗಳ ನೋಂದಣಿಗೆ ಟ್ಯಾಕ್ಸ್ ವಿಧಿಸಬೇಕೆಂಬ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸಿರುವುದರಿಂದ ವಿದ್ಯುತ್ಚಾಲಿತ ವಾಹನ ಖರೀದಿದಾರರು ಕೊಂಚ ನಿರಾಳರಾಗಬಹುದು.
ದೇಶಾದ್ಯಂತ 2023 ಜು.14ರವರೆಗೆ 27,44,019 ಇ-ವಾಹನಗಳು ನೋಂದಣಿಯಾಗಿವೆ. ಕರ್ನಾಟಕದಲ್ಲಿ 2,39,948 ವಿದ್ಯುತ್ಚಾಲಿತ ವಾಹನಗಳಿವೆ. ವರ್ಷದಿಂದ ವರ್ಷಕ್ಕೆ ಎಲೆಕ್ಟ್ರಿಕ್ ವಾಹನಗಳ ಖರೀದಿ ಹಾಗೂ ಬುಕ್ಕಿಂಗ್ ಹೆಚ್ಚುತ್ತಿರುವುದನ್ನು ಗಮನಿಸಿದ ಸಾರಿಗೆ ಇಲಾಖೆ, ಆದಾಯ ವೃದ್ಧಿಗೆ ರಸ್ತೆ ತೆರಿಗೆ ವಿಧಿಸಲು ನಿರ್ಧರಿಸಿತ್ತು.
ಅಲ್ಲದೆ, ಪ್ರಸ್ತಾವನೆ ಸಿದ್ಧಪಡಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಪ್ರಸ್ತಾವನೆ ಪರಿಶೀಲಿಸಿರುವ ಸಿಎಂ ಸಿದ್ದರಾಮಯ್ಯ, ರಸ್ತೆ ತೆರಿಗೆ ವಿಧಿಸುವುದಕ್ಕೆ ಒಪ್ಪಿಗೆ ನೀಡಿಲ್ಲ.
ವಾಯುಮಾಲಿನ್ಯ ನಿಯಂತ್ರಣಕ್ಕೆ ಎಲ್ಲ ಸರ್ಕಾರಗಳು ಈಗಾಗಲೇ ಇ-ವಾಹನಗಳ ಖರೀದಿಗೆ ಉತ್ತೇಜನ ನೀಡುತ್ತಿವೆ. 2030ರ ವೇಳೆಗೆ ದೇಶದಲ್ಲಿ ವಾಣಿಜ್ಯ ಬಳಕೆಯ ವಾಹನಗಳಲ್ಲಿ ಇ-ವಾಹನಗಳ ಪಾಲು ಶೇ.70, ಖಾಸಗಿ ವಾಹನಗಳಲ್ಲಿ ಶೇ.30, ಬಸ್ಗಳಲ್ಲಿ ಶೇ.40 ಮತ್ತು ದ್ವಿಚಕ್ರ ಹಾಗೂ 3 ಚಕ್ರದ ವಾಹನಗಳಲ್ಲಿ ಶೇ.80 ಇ-ವಾಹನಗಳಾಗಿರಬೇಕು ಎಂದು ಕೇಂದ್ರ ಸರ್ಕಾರ ಗುರಿ ಹೊಂದಿದ್ದು, ಒಟ್ಟಾರೆ 2070ರ ವೇಳೆಗೆ ಪಳೆಯುಳಿಕೆ ಇಂಧನ ಬಳಕೆ ವಾಹನಗಳೇ ಇರಬಾರದೆಂದು ಗುರಿ ಇಟ್ಟುಕೊಂಡಿದೆ. ಆದರೀಗ ಇ-ವಾಹನಗಳ ಖರೀದಿಗೆ ನೀಡಲಾಗುತ್ತಿದ್ದ ಸಬ್ಸಿಡಿ ಮೊತ್ತವನ್ನು ಕೇಂದ್ರ ಸರ್ಕಾರವೇ ನಿಲ್ಲಿಸಿದೆ. ಈ ಹಂತದಲ್ಲಿ ಕರ್ನಾಟಕದಲ್ಲಿ ರಸ್ತೆ ತೆರಿಗೆ ವಿನಾಯಿತಿಯನ್ನು ಮೊಟಕುಗೊಳಿಸಿ, ಟ್ಯಾಕ್ಸ್ ವಿಧಿಸಿದರೆ ವಿದ್ಯುತ್ಚಾಲಿತ ವಾಹನಗಳ ಖರೀದಿದಾರರ ಸಂಖ್ಯೆ ದೊಡ್ಡಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಸಿದ್ಧಪಡಿಸಿದ್ದ ಪ್ರಸ್ತಾವನೆಯನ್ನು ಸರ್ಕಾರ ಅಂಗೀಕರಿಸಿಲ್ಲ.