ಫ್ರೀಡಂ ಪಾರ್ಕ್​ನಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ; ಭಾರಿ ಗಿಫ್ಟ್​ ಕೊಟ್ಟ ಸರ್ಕಾರ…

kabbu
Published on

ಬೆಂಗಳೂರು: ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟ ಇಂದು ನಿನ್ನೆಯದಲ್ಲ. ಒಮ್ಮೆ ಬೆಂಬಲ ಬೆಲೆ ಹೆಚ್ಚಿಸಬೇಕು ಎಂದು ಹೋರಾಟ ನಡೆದರೆ ಬಾಕಿ ಹಣ ಪಾವತಿ ಆಗಬೇಕು ಎಂದು ಪ್ರತಿಭಟನೆ ನಡೆಯುತ್ತದೆ. ಇದೀಗ ಕಬ್ಬಿನ ಬಾಕಿ ಮೊತ್ತವನ್ನು ಬಿಡುಗಡೆ ಮಾಡಿ ಎಂದು ಆಗ್ರಹಿಸಿ ಕಬ್ಬು ಬೆಳೆಗಾರರು ಹೋರಾಟ ಮಾಡುತ್ತಿದ್ದಾರೆ.

ಕಬ್ಬಿನ ಬಾಕಿ ಮೊತ್ತ ಬಿಡುಗಡೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಇದೀಗ ಪ್ರತಿಭಟನೆ ಹಿನ್ನೆಲೆ ಸಚಿವ ಶಂಕರ್ ಪಾಟೀಲ್‌ ಮುನೇನಕೊಪ್ಪ ಕಬ್ಬು ಬೆಳೆಗಾರರ ಜೊತೆ ಸಭೆ ನಡೆಸುತ್ತಿದ್ದಾರೆ.

ಕಬ್ಬು ನಿಯಂತ್ರಣ ಮಂಡಳಿಯ ಸಭೆ ವಿಕಾಸಸೌದಲ್ಲಿ ನಡೆಯುತ್ತಿದ್ದು ಸಭೆಯಲ್ಲಿ ರೈತ ಹೋರಾಟಗಾರಾದ ಕುರುಬೂರು ಶಾಂತಕುಮಾರ್, ಸಿದ್ದಗೌಡ ಮೋದಗಿ ಮತ್ತಿತರರು ಭಾಗಿಯಾಗಿದ್ದಾರೆ. ಈ ಸಭೆಯಲ್ಲಿ ಸಚಿವರು ಅನೇಕ ನಿರ್ಣಯ ಕೈಗೊಂಡಿದ್ದು ರಾಜ್ಯ ಸರ್ಕಾರದಿಂದ ಕಬ್ಬು ಬೆಳೆಗಾರರಿಗೆ 204.47 ಕೋಟಿ ಗಿಫ್ಟ್ ನೀಡಿದ್ದಾರೆ.

FRP ದರದ ಪಾವತಿ ಬಳಿಕ ಹೆಚ್ಚುವರಿಯಾಗಿ ಪ್ರತಿ ಟನ್ ಗೆ 50 ರೂಪಾಯಿಯನ್ನು ಸರ್ಕಾರ ನೀಡುವಂತೆ ಆದೇಶಿಸಿದೆ. ಇದೀಗ ಕಬ್ಬು ಬೆಳೆಗಾರರ ಹೋರಾಟ ಫಲಕೊಟ್ಟಿದ್ದು ಒಟ್ಟು 204.47 ಕೋಟಿ ರೂ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ.

ಉಪ ಉತ್ಪನ್ನಗಳಲ್ಲೂ ಲಾಭಾಂಶ ಬೇಕು ಎಂದು ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ರಾಜ್ಯ ಸರ್ಕಾರ ಒಪ್ಪಿದ್ದು ಮೊದಲ ಹಂತದಲ್ಲಿ ಕಬ್ಬಿನ ಉಪ ಉತ್ಪನ್ನ ಎಥೆನಾಲ್ ಮೇಲಿನ ಲಾಭ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರದ ತೀರ್ಮಾನವನ್ನು ಇಂದೇ ಆದೇಶವಾಗಿ ಹೊರಡಿಸಲು ಸಚಿವರು ಸಂಬಂಧಪಟ್ಟ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net