

ಜೈಪುರ: ಸರ್ಕಾರಿ ಶಿಕ್ಷಕರ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇಕಡಾ 50ರಷ್ಟು ಸೀಟು ಮೀಸಲಿಡಲಾಗುವುದು ಎಂದು ರಾಜಸ್ಥಾನ ಸರ್ಕಾರ ಹೊಸ ಪ್ರಕಟಣೆ ಹೊರಡಿಸಿದೆ. ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ಈ ಕುರಿತು ರಾಜಸ್ಥಾನ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿಯನ್ನು ಅನುಮೋದಿಸಿದ್ದಾರೆ. ಆರು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಸಿಎಂ ಈ ಘೋಷಣೆ ಮಾಡಿದ್ದಾರೆ ಎನ್ನಲಾಗಿದೆ.
ಈ ಮೂಲಕ ನಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ ಮತ್ತೊಂದು ಭರವಸೆಯನ್ನು ನಾವು ಈಡೇರಿಸಿದ್ದೇವೆ. ಈ ನಿರ್ಧಾರವು 'ಸದೃಢ ಮಹಿಳೆ, ಅಭಿವೃದ್ಧಿ ಹೊಂದಿದ ರಾಜಸ್ಥಾನ' ಪರಿಕಲ್ಪನೆಯನ್ನು ಅರಿತುಕೊಳ್ಳಲು ಮತ್ತು ರಾಜ್ಯದ ಮಹಿಳಾ ಶಕ್ತಿಗೆ ಹೊಸ ಸಾಧ್ಯತೆಗಳು ಮತ್ತು ಉದ್ಯೋಗವನ್ನು ಸೃಷ್ಟಿಸಲು ಸಹಾಯಕವಾಗಲಿದೆ ಎಂದು ಸಿಎಂ ತಾವು ಹಂಚಿಕೊಂಡ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಮಹಿಳೆಯರು ಶೇ.30ರಷ್ಟು ಮೀಸಲಾತಿ ಪಡೆಯುತ್ತಿದ್ದ ಗ್ರೇಡ್ ಥರ್ಡ್ ಶಿಕ್ಷಕರ ವರ್ಗದಲ್ಲಿ ಶೇ.20ರಷ್ಟು ಕೋಟಾವನ್ನು ಹೆಚ್ಚಿಸಲಾಗಿದೆ. ಗ್ರೇಡ್ ಮೂರರಲ್ಲಿ ಸುಮಾರು 1.50 ಲಕ್ಷ ಪೋಸ್ಟ್‌ಗಳಿವೆ ಮತ್ತು ಇದು ರಾಜಸ್ಥಾನದಲ್ಲಿ ಸರ್ಕಾರಿ ಉದ್ಯೋಗಿಗಳ ದೊಡ್ಡ ವರ್ಗವಾಗಿದೆ. ರಾಜ್ಯದಲ್ಲಿ ಸುಮಾರು 27 ಸಾವಿರ ಗ್ರೇಡ್ ಥರ್ಡ್ ಶಿಕ್ಷಕರ ಹುದ್ದೆಗಳು ಇನ್ನೂ ಖಾಲಿ ಉಳಿದಿದ್ದು, ಮುಂದಿನ ದಿನಗಳಲ್ಲಿ ಭರ್ತಿಯಾಗುವ ನಿರೀಕ್ಷೆಯಿದೆ ಎಂದಿದ್ದಾರೆ,(ಏಜೆನ್ಸೀಸ್).