

ನ್ಯೂಯಾರ್ಕ್: ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಮೆಂಟರ್ ಆಗಿ ಸೇವೆ ಸಲ್ಲಿಸಿದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅವರ ಕೊಡುಗೆಯನ್ನು ನೆನಪಿಸಿಕೊಂಡ ಆಫ್ಘಾನಿಸ್ತಾನದ ಕ್ರಿಕೆಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಸೀಬ್ ಖಾನ್, ಅಂದು ಅಜಯ್ ಮಾಡಿದ ಸಹಾಯವೇನು? ಎಂಬುದನ್ನು ಕ್ರಿಕೆಟ್ ಅಭಿಮಾನಿಗಳಿಂದ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಕಳೆದ ವರ್ಷದ ವಿಶ್ವಕಪ್‌ನಲ್ಲಿ ನಮ್ಮ ತಂಡವನ್ನು ಮೆಂಟರ್ ಆಗಿ ಮುನ್ನಡೆಸಿದ ಅಜಯ್ ಜಡೇಜಾ ಅವರು, "ತಮ್ಮ ಕೆಲಸಕ್ಕಾಗಿ ನಮ್ಮಿಂದ ಒಂದು ರೂಪಾಯಿ ಕೂಡ ಪಡೆಯಲಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಬಾರಿ ನಮ್ಮ ಕ್ರಿಕೆಟ್ ಮಂಡಳಿ ಅವರೊಂದಿಗೆ ಮಾತುಕತೆ ನಡೆಸಿತು. ನೀವು ನಿಮ್ಮ ಶ್ರಮಕ್ಕೆ ಹಣ ಪಡೆಯುವುದರಲ್ಲಿ ಏನಿದೆ? ಇದು ನಿಮ್ಮ ಕರ್ತವ್ಯಕ್ಕೆ ವಿರುದ್ಧವಾಗಿದೆ. ಹೀಗೆ ಮಾಡಬೇಡಿ, ದಯವಿಟ್ಟು ಸಂಬಳ ತೆಗೆದುಕೊಳ್ಳಿ ಎಂದು ಅನೇಕ ಬಾರಿ ಒತ್ತಾಯಿಸಿದೆ" ಎಂದು ನಸೀಬ್ ಖಾನ್ ಹೇಳಿದರು.
"ಇದರಿಂದ ನಮಗೆ ಬಹಳ ಬೇಸರವಾಯಿತು. ಆದರೆ, ತಾನು ಹಣ ಏಕೆ ಪಡೆಯುತ್ತಿಲ್ಲ ಎಂಬ ಕಾರಣವನ್ನು ಅಜಯ್ ಅವರು ನಮಗೆ ತಿಳಿಸಿದಾಗ ನಿಜಕ್ಕೂ ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಾಯಿತು. 'ನೀವು ಉತ್ತಮವಾಗಿ ಆಡಿದರೆ ಸಾಕು. ಅದಕ್ಕಿಂತ ನನಗೆ ಇನ್ನೇನು ಬೇಕಿಲ್ಲ. ನೀವು ಕೊಡುವ ಹಣ ಅಥವಾ ಬಹುಮಾನ, ಯಾವುದೂ ಕೂಡ ನನಗೆ ಬೇಕಾಗಿಲ್ಲ' ಎಂದರು. ಅವರ ಈ ಹೃದಯ ವೈಶಾಲ್ಯತೆಗೆ ನಾವೆಷ್ಟು ಧನ್ಯವಾದ ತಿಳಿಸಿದರೂ ಸಾಲದು" ಎಂದು ನಸೀಬ್ ಹೇಳಿದ್ದಾರೆ,(ಏಜೆನ್ಸೀಸ್).