

ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ವಿಚ್ಛೇದನದನ ಪರ್ವ ಶುರುವಾಗಿದ್ದು ಎಲ್ಲರಿಗೂ ತಿಳಿದಿದೆ. ಮೊದಲಿಗೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್, ನಂತರ ಯುವ ರಾಜ್‌ಕುಮಾರ್ ವಿಚ್ಛೇದನದ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತು. ಅವರ ಡಿವೋರ್ಸ್ ಪ್ರಕರಣ ಆರೋಪ-ಪ್ರತ್ಯಾರೋಪಗಳಲ್ಲಿ ಮುಳುಗಿರುವಾಗ ಮಧ್ಯೆ ನಟಿ ಸಪ್ತಮಿಗೌಡ ಹೆಸರು ಕೂಡ ಕೇಳಿಬಂತು.
ಶ್ರೀದೇವಿ ಭೈರಪ್ಪ ತಮ್ಮ ವಕೀಲರ ಮೂಲಕ ನೀಡಿದ್ದ ರಿಪ್ಲೈ ನೋಟಿಸ್ನಲ್ಲಿ ಯುವರಾಜ್ಕುಮಾರ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಅದರಲ್ಲಿ ಮಾನಸಿಕ ಹಿಂಸೆ, ಆರ್ಥಿಕ ನಿರ್ಬಂಧ ಸೇರಿ ಯುವ ರಾಜ್‌ಕುಮಾರ್ ಜತೆ ನಟಿಸಿದ ಸಪ್ತಮಿಗೌಡ ಹೆಸರನ್ನು ಆ ನೋಟಿಸ್ನಲ್ಲಿ ಉಲ್ಲೇಖ ಮಾಡಲಾಗಿತ್ತು. ತಮ್ಮ ಪತಿ ಯುವ ರಾಜ್‌ಕುಮಾರ್ ಸಹ ನಟಿ ಸಪ್ತಮಿ ಗೌಡ ಜತೆ ಸಂಬಂಧ ಹೊಂದಿದ್ದಾರೆ ಎಂದು ಆರೋಪ ಮಾಡಿದ್ದರು.
ಈ ಆರೋಪವನ್ನು ಕೇಳಿ ಸಪ್ತಮಿಗೌಡ ಕುಟುಂಬ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿತ್ತು. ಶ್ರೀದೇವಿ ಭೈರಪ್ಪ ವಿರುದ್ಧ ನಟಿ ಸಪ್ತಮಿಗೌಡ ಕೋರ್ಟ್ ಮೆಟ್ಟಿಲೇರಿದ್ದರು. ಸಪ್ತಮಿಗೌಡ ಸಲ್ಲಿಸಿದ್ದ ಅರ್ಜಿಯಲ್ಲಿ ಯುವ ರಾಜ್‌ಕುಮಾರ್ ವಿಚ್ಛೇದನ ಪ್ರಕರಣದಲ್ಲಿ ತಮ್ಮ ಹೆಸರನ್ನು ತಳುಕು ಹಾಕಲಾಗುತ್ತಿದೆ. ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಚಾರಿತ್ರ್ಯವಧೆ ಮಾಡಲಾಗುತ್ತಿದೆ ಎಂದು ಉಲ್ಲೇಖಿಸಿದ್ದರು.
ಶನಿವಾರ (ಜೂನ್ 15) ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಮಾನಹಾನಿಕರ ಹೇಳಿಕೆ ನೀಡದಂತೆ ನಿರ್ಬಂಧಕಾಜ್ಞೆ ನೀಡಿ ಶ್ರೀದೇವಿ ಭೈರಪ್ಪ ಅವರಿಗೆ ನೋಟಿಸ್ ಜಾರಿ ಮಾಡಿದೆ.