ಗೋವಿಂದಬಾಬು ಪೂಜಾರಿ ಮೇಲೇ ಆರೋಪ ಇರುವುದರಿಂದ ಅವರ ದೂರಿನ ಮೇಲೆ ಅನುಮಾನ ಇದೆ: ವಕೀಲ ಅರುಣ್​ ಶ್ಯಾಂ

Chaithra Kundapura (3)
Published on

ಬೆಂಗಳೂರು: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ ಕೊಡಿಸುವುದಾಗಿ ಕೋಟ್ಯಂತರ ರೂ. ಪಡೆದು ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಚೈತ್ರಾ ಕುಂದಾಪುರ ಮತ್ತವರ ತಂಡ ಬಂಧನಕ್ಕೆ ಒಳಗಾಗಿರುವ ಪ್ರಕರಣದ ಕುರಿತು ಇಂದು ಮಹತ್ವದ ಬೆಳವಣಿಗೆ ನಡೆದಿದೆ.

ಈ ಪ್ರಕರಣದಲ್ಲಿ ಅಭಿನವ ಹಾಲಶ್ರೀ ಸ್ವಾಮೀಜಿ ವಿರುದ್ಧವೂ ಆರೋಪ ಕೇಳಿಬಂದಿದ್ದು, ಬಂಧನದ ಭೀತಿ ಎದುರಿಸುತ್ತಿರುವ ಅವರು ನಿರೀಕ್ಷಣಾ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸಿಸಿಬಿ ಕಾಲಾವಕಾಶ ಕೇಳಿದೆ. ಆದರೆ ಹೀಗೆ ಕಾಲಾವಕಾಶ ಕೇಳಿ ಕಾಲಹರಣ ಮಾಡಲಾಗುತ್ತಿದೆ ಎಂದು ಹಾಲಶ್ರೀ ಪರ ವಕೀಲ ಅರುಣ್ ಶ್ಯಾಂ ಹೇಳಿದ್ದಾರೆ.

ಅಭಿನವ ಹಾಲಶ್ರೀ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ವಕೀಲ ಅರುಣ್ ಶ್ಯಾಂ ಇಂದು ಹೈಕೋರ್ಟ್​ನಲ್ಲಿ ವಾದ ಮಂಡಿಸಿದ್ದಾರೆ. ಗೋವಿಂದಬಾಬು ಪೂಜಾರಿ ಆರು ತಿಂಗಳ ಹಿಂದೆಯೇ ದೂರು ನೀಡಬೇಕಿತ್ತು, ಆದರೆ 6 ತಿಂಗಳ ಬಳಿಕ ದೂರು ನೀಡಿದ್ದಾರೆ. ಅಲ್ಲದೆ ಗೋವಿಂದಬಾಬು ಪೂಜಾರಿ ಮೇಲೆ ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ಮೋಸದ ಆರೋಪವಿದೆ. ಅವರ ಮೇಲೇ ಆರೋಪ ಇರುವುದರಿಂದ ಅವರು ನೀಡಿದ ದೂರಿನ ಮೇಲೆ ಅನುಮಾನವಿದೆ ಎಂದು ಅರುಣ್​ ಶ್ಯಾಂ ವಾದಿಸಿದ್ದು, ಅರ್ಜಿ ವಿಚಾರಣೆ ಸೆ. 19ಕ್ಕೆ ಮುಂದೂಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net