

ಬೆಂಗಳೂರು: ಕರೊನಾ ಬಾರದಂತೆ ತಡೆಗಟ್ಟಲು ಏನ್ ಮಾಡ್ತೀರಿ? ಮೊದ್ಲು ಅದನ್ನು ಹೇಳಿ ಎಂದು ರಾಜ್ಯಪಾಲ ವಜುಭಾಯಿ ವಾಲಾ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ
ರಾಜ್ಯಪಾಲರನ್ನು ಮಂಗಳವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿದರು. ಬೆಂಗಳೂರು ಮಹಾನಗರ ಸೇರಿದಂತೆ 8-10 ಜಿಲ್ಲೆಗಳಲ್ಲಿ ಸೋಂಕು ಪ್ರಕರಣ ಹೆಚ್ಚಿವೆ ಎನ್ನುವ ಮಾಹಿತಿ ನೀಡಲಾಗಿದೆ. ಇದಕ್ಕೆ ಉತ್ತರಿಸಿದ ರಾಜ್ಯಪಾಲರು, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಒಂದು ಭಾಗವಾದರೆ, ಕರೊನಾ ಬಾರದಂತೆ ತಡೆಗಟ್ಟಲು ಏನ್ ಮಾಡ್ತೀರಿ?ಮೊದಲು ಅದನ್ನ ಹೇಳಿ ಎಂದರು. ಆಗ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಏನೆಲ್ಲ ಮಾಡಿದೆ? ಯಾವೆಲ್ಲ ಕ್ರಮಗಳನ್ನು ಕೈಗೊಂಡಿದೆ? ಎನ್ನುವುದರ ಕುರಿತು ದಾಖಲೆಗಳ ಸಹಿತ ಮುದ್ರಿತ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ಹಾಸಿಗೆ, ಆಮ್ಲಜನಕ ವ್ಯವಸ್ಥೆ, ಅಂಬುಲೆನ್ಸ್, ರೆಮ್ ಡಿಸಿವಿರ್ ಚುಚ್ವುಮದ್ದು, ವೈದ್ಯರು ಮತ್ತು ಸಿಬ್ಬಂದಿ, ಕರೊನಾ ಆರೈಕೆ ಕೇಂದ್ರ ಇತ್ಯಾದಿ ವಿವರಗಳನ್ನು ಒದಗಿಸಲಾಗಿದೆ ಎಂದು ಅಶೋಕ್ ತಿಳಿಸಿದರು. ಜನರ ಪ್ರಾಣ, ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ. ಬೇರೆ ಕೆಲವು ರಾಜ್ಯಗಳಲ್ಲಾದ ವೈಫಲ್ಯ ಕರ್ನಾಟಕದಲ್ಲಿ ಮರುಕಳಿಸದಂತೆ ನೋಡಿಕೊಳ್ಳಿರಿ ಎಂದು ರಾಜ್ಯಪಾಲರು ಸಲಹೆ ನೀಡಿದ್ದಾಗಿ ವಿವರಿಸಿದರು.
ಸಂಜೆ ಸರ್ವಪಕ್ಷಗಳ ಸಭೆ ಬಳಿಕ ಮುಖ್ಯಮಂತ್ರಿ, ಸಚಿವ ಸಂಪುಟದ ಸಹೋದ್ಯೋಗಿಗಳು ಸೇರಿಕೊಂಡು ಚರ್ಚಿಸಿ ಏನೆಲ್ಲ ಸಾಧ್ಯವೋ ಅಷ್ಟು ಕಠಿಣ ನಿಯಮಗಳ ಬಗ್ಗೆ ನಿರ್ಧರಿಸಿ ಎಂಬ ಸೂಚನೆಯನ್ನೂ ರಾಜ್ಯಪಾಲರು ಕೊಟ್ಟಿದ್ದಾರೆ ಎಂದು ಅಶೋಕ್ ತಿಳಿಸಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಿಎಂ ಬಿಎಸ್ವೈ ಅವರನ್ನು ಭೇಟಿಯಾಗಿ ರಾಜ್ಯಪಾಲರಿಗೆ ವರದಿ ಸಲ್ಲಿಕೆ ಹಾಗೂ ವಜುಭಾಯಿ ವಾಲಾ ಅವರ ಸಲಹೆಗಳ ಕುರಿತು ತಿಳಿಸಲಾಗುವುದು ಎಂದರು.
20,000 ಬಾಟಲಿ ರೆಮ್ ಡಿಸಿವಿರ್ ಚುಚ್ಚುಮದ್ದು ಪೂರೈಕೆ ಇದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ತಲಾ ರೆಮ್ ಡಿಸಿವಿರ್ ಚುಚ್ಚುಮದ್ದು ಬಾಟಲಿ (ವಯಲ್ಸ್)ಗಳನ್ನು ತಕ್ಷಣಕ್ಕೆ ಸರಬರಾಜು ಮಾಡಲಾಗುತ್ತಿದೆ. ಇದರ ಹೊರತಾಗಿ ಸರ್ಕಾರದ ಬಳಿ 25,000 ವಯಲ್ಸ್ ದಾಸ್ತಾನಿದೆ ಎಂದು ಆರ್.ಅಶೋಕ್ ತಿಳಿಸಿದರು.