

ಬೆಂಗಳೂರು: ರಾಜ್ಯದಲ್ಲಿ ಕಠಿಣ ಕ್ರಮ ಜಾರಿಗೊಳಿಸುವ ಮೂಲಕ ಕರೊನಾ ಎರಡನೇ ಅಲೆ ನಿಯಂತ್ರಿಸಲು ಶತಪ್ರಯತ್ನ ನಡೆಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ತಂಡ, ತಜ್ಞರ ಎಚ್ಚರಿಕೆಯಂತೆ ಮೂರನೇ ಅಲೆ ಎದುರಿಸಲು ಈಗಿಂದಲೇ ಬಿರುಸಿನ ಸಿದ್ಧತೆ ನಡೆಸುತ್ತಿದೆ. ಕರೊನಾ ನಿಯಂತ್ರಣಕ್ಕೆ ಬಿಎಸ್ವೈ ಪ್ರಯೋಗಿಸಿದ ‘ಹೊಣೆಗಾರಿಕೆ ಹಂಚಿಕೆ’ ಅಸ್ತ್ರ ನಿರೀಕ್ಷಿತ ಫಲ ನೀಡಿದೆ. ಆಮ್ಲಜನಕ, ಹಾಸಿಗೆ, ರೆಮ್ೆಸಿವಿರ್ ಚುಚ್ಚುಮದ್ದಿನ ಹಾಹಾಕಾರ ಕ್ರಮೇಣ ಇಳಿಮುಖವಾಗಿದೆ. ಪ್ರಮುಖ ಕೆಲಸಗಳ ಜವಾಬ್ದಾರಿಯನ್ನು ಹಿರಿಯ ಸಚಿವರಿಗೆ ನೀಡಿರುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ಗೆ ಬಲ ತುಂಬಿದೆ. ಒತ್ತಡದಿಂದ ಹೊರಬಂದು ಪ್ರತಿಯೊಂದು ನಿರ್ಧಾರಗಳ ಅನುಷ್ಠಾನದ ಮೇಲೆ ನಿಗಾವಹಿಸಲು ಸಾಧ್ಯವಾಗಿದೆ. ಸಿಎಂ ವಿಶ್ವಾಸಕ್ಕೆ ತಕ್ಕಂತೆ ನಡೆದುಕೊಂಡ ‘ಪಂಚ ಸಚಿವರು’ ಸವಾಲನ್ನು ಅವಕಾಶವಾಗಿ ಪರಿವರ್ತಿಸಿಕೊಂಡಿದ್ದಾರೆ. ಸದ್ಯದ ಪರಿಸ್ಥಿತಿ ನಿರ್ವಹಣೆ, ಗ್ರಾಮೀಣ ಭಾಗಕ್ಕೆ ಸೋಂಕಿನ ದಿಗಿಲು ನಿವಾರಣೆ, ಸಂಭಾವ್ಯ 3ನೇ ಅಲೆ ಪೂರ್ವತಯಾರಿಗೆ ಹೆಗಲು ನೀಡಿದ್ದಾರೆ. ಕರೊನಾ ವಿರುದ್ಧದ ಸಮರಕ್ಕೆ ತಮ್ಮದೇ ಆದ ‘ರಣವ್ಯೂಹ’ ರಚಿಸಿದ್ದಾರೆ. ಈ ಬಗ್ಗೆ ವಿಜಯವಾಣಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಹಲವು ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.
ಹಾಸಿಗೆ, ಆಮ್ಲಜನಕ, ರೆಮ್ಡೆಸಿವಿರ್ ಚುಚ್ಚುಮದ್ದು, ಆಂಬುಲೆನ್ಸ್, ಸೋಂಕಿನಿಂದ ಮೃತಪಟ್ಟವರ ಗೌರವಯುತ ಅಂತ್ಯಸಂಸ್ಕಾರಕ್ಕೆ ಪ್ರಾರಂಭಿಕ ತೊಂದರೆ ಎದುರಾಗಿದ್ದು ನಿಜವೆಂದು ಒಪ್ಪಿಕೊಂಡ ಸಚಿವರು, ನಿರೀಕ್ಷೆಗೂ ಮೀರಿ ಸೋಂಕು ಹರಡುವಿಕೆ, ಪರಿಸ್ಥಿತಿ ಗಂಭೀರವಾದ ಬಳಿಕ ಜನರು ಆಸ್ಪತ್ರೆಗಳತ್ತ ಮುಖ ಮಾಡಿದ್ದೂ ಈ ಸಮಸ್ಯೆಗೆ ಕಾರಣ ಎಂದಿದ್ದಾರೆ.
ರಾಜ್ಯಕ್ಕೆ ಬೇಕು 1,700 ಮೆಟ್ರಿಕ್ ಟನ್ ಆಮ್ಲಜನಕ: ಕರೊನಾ ಸೋಂಕು ಪ್ರಕರಣಗಳು ಗರಿಷ್ಠಮಟ್ಟ ತಲುಪಿದರೆ ಮೇ ಅಂತ್ಯದ ವೇಳೆಗೆ ಆಮ್ಲಜನಕ ಬೇಡಿಕೆ 1,700 ಮೆಟ್ರಿಕ್ ಟನ್ ಆಗಬಹುದು ಎಂದು ಸರ್ಕಾರ ಅಂದಾಜಿಸಿದೆ. ಜತೆಗೆ ಯಾವ ಮೂಲದಿಂದ ಸಂಗ್ರಹ, ವಿತರಣೆ ಮಾಡಬೇಕು ಎಂಬ ಬಗ್ಗೆ ನೀಲಿನಕ್ಷೆ ಸಿದ್ಧಪಡಿಸಿಕೊಂಡಿದೆ. ಕೇಂದ್ರ ಸರ್ಕಾರದ ಹಂಚಿಕೆ ಪ್ರಮಾಣ 300 ರಿಂದ 1,105 ಟನ್ಗಳಿಗೆ ಏರಿಕೆಯಾಗಿದೆ. ಮುಂದೆ 1200ರಿಂದ 1400 ಟನ್ ಬೇಕಾಗಬಹುದು ಎಂಬ ಬೇಡಿಕೆಯನ್ನೂ ರಾಜ್ಯ ಸರ್ಕಾರ ಮಂಡಿಸಿದೆ.
ಮೊದಲ ಅಲೆ ಪ್ರವೇಶಿಸಿದ ವೇಳೆ ರಾಜ್ಯದ ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳಲ್ಲಿದ್ದ ಸವಲತ್ತುಗಳ ಪ್ರಮಾಣದಲ್ಲಿ ಈಗ ಗಮನಾರ್ಹ ಸುಧಾರಣೆಯಾಗಿದೆ ಎನ್ನುವುದಕ್ಕೆ ಕೆಳಕಂಡ ಅಂಕಿ-ಅಂಶಗಳು ನಿದರ್ಶನ.
ಮೂರು ತಿಂಗಳಿಗೆ ಬೇಕಾಗುವಷ್ಟು ರೆಮ್ಡೆಸಿವಿರ್ ಇನ್ನಿತರ ಔಷಧ, ಮಾತ್ರೆಗಳನ್ನು ಸಂಗ್ರಹಿಸಿಟ್ಟುಕೊಳ್ಳಲಾಗುತ್ತಿದೆ. 140 ಕೋಟಿ ರೂ. ವೆಚ್ಚದಲ್ಲಿ ಲ್ಯಾಬ್ಗಳ ಯಾಂತ್ರೀಕರಣ, ಟೆಸ್ಟ್ ಕಿಟ್ ಮತ್ತಿತರ ಪರಿಕರಗಳನ್ನು ಹೊಂದಿಸಿಕೊಳ್ಳಲಾಗುವುದು.
| ಡಾ.ಸಿ.ಎನ್. ಅಶ್ವತ್ಥ ನಾರಾಯಣ ಡಿಸಿಎಂ
ಖಾಸಗಿ ಮೆಡಿಕಲ್ ಕಾಲೇಜುಗಳು ನಮಗೆ 8338 ಹಾಸಿಗೆ ಕೊಡಬೇಕು. ಹಂತ ಹಂತವಾಗಿ ಬಾಕಿ ಇರುವ ಹಾಸಿಗೆ ಪಡೆದುಕೊಳ್ಳಲಿದ್ದೇವೆ. ಮುಂದಿನ ದಿನಗಳಲ್ಲಿ ಹಾಸಿಗೆಗಳನ್ನು 35 ರಿಂದ 40 ಸಾವಿರಕ್ಕೆ ಹೆಚ್ಚಿಸಲು ಸಿದ್ಧತೆ ನಡೆದಿದೆ.
| ಬಸವರಾಜ ಬೊಮ್ಮಾಯಿ ಗೃಹ ಸಚಿವ
ಮಕ್ಕಳ ಸಲುವಾಗಿಯೇ ಪ್ರತಿಯೊಂದು ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ಜತೆಗೆ ಸದ್ಯದಲ್ಲೇ ವಿಡಿಯೋ ಕಾನ್ಪರೆನ್ಸ್ ನಡೆಸಿ ಸಿದ್ಧತೆಗಳ
ಬಗ್ಗೆ ಸಮಾಲೋಚಿಸುವೆ.
| ಆರ್.ಅಶೋಕ್ ಕಂದಾಯ ಸಚಿವ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಹಲವರು ವೈದ್ಯರು ಸೂಚಿಸಿದರೂ ಆಕ್ಸಿಜನ್ ಬೆಡ್ ಬಿಡುತ್ತಿಲ್ಲ. ಇಂತಹವರು ದಯಮಾಡಿ ಅಗತ್ಯ ಇರುವವರಿಗೆ ಬೆಡ್ ಬಿಟ್ಟುಕೊಡಲಿ. ಜತೆಗೆ ಆಸ್ಪತ್ರೆಗಳು ರೋಗಿಗೆ
ಅಗತ್ಯ ಇರುವಷ್ಟೇ ಹಿತಮಿತವಾಗಿ ಆಕ್ಸಿಜನ್ ಬಳಸಬೇಕು.
| ಜಗದೀಶ ಶೆಟ್ಟರ್ ಕೈಗಾರಿಕೆ ಸಚಿವ