ಸರ್ಕಾರದ ಜಾಹೀರಾತು ಪರಿಣಾಮ ಮೌಲ್ಯಮಾಪನ; ಹೊಸ ಪ್ರಯೋಗಕ್ಕೆ ಮುಂದಾದ ಸರ್ಕಾರ...

Advertisement
Published on

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಸರ್ಕಾರವು ತನ್ನ ಕಾರ್ಯಕ್ರಮ, ಕಾಮಗಾರಿಯ ಉಪಯೋಗದ ಬಗ್ಗೆ ಆಗಿಂದಾಗ್ಗೆ ಮೌಲ್ಯಮಾಪನ ಮಾಡುವ ಪದ್ಧತಿ ಹಿಂದಿನಿಂದಲೂ ಇದೆ. ಜನರ ತೆರಿಗೆ ಹಣದ ಬಳಕೆ ಸದುದ್ದೇಶದಿಂದ ಕೂಡಿರಬೇಕೆಂಬುದು ಈ ತೀರ್ಮಾನದ ಹಿಂದಿನ ಆಶಯ. ಇದೀಗ ಸರ್ಕಾರ ತಾನು ನೀಡುವ ಜಾಹೀರಾತಿನ ಪರಿಣಾಮ ಏನು ಎಂದು ಅರಿಯಲು ಮೌಲ್ಯಮಾಪನ ಮಾಡಲು ಬಯಸಿದೆ.

ಸರ್ಕಾರದ ಜಾಹೀ ರಾತು ವ್ಯವಸ್ಥೆಯನ್ನು ಅಧಿಕೃತವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿಭಾಯಿಸು ತ್ತದೆ. ಪ್ರತಿವರ್ಷ ಬಸ್ ಶೆಲ್ಟರ್, ಬಸ್​ಗಳಲ್ಲಿ, ಹೋರ್ಡಿಂಗ್ಸ್ ಮೂಲಕ ಪ್ರಚಾರ ನಡೆಸುತ್ತದೆ. ಇದಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತದೆ. ಆದರೆ, ಇದರ ಉಪಯೋಗ ಏನು- ಎತ್ತ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಈ ಕಾರಣಕ್ಕೆ ಜಾಹೀರಾತು ಮೌಲ್ಯಮಾಪನ ನಡೆಸಲಾಗುತ್ತಿದೆ.

ಕಳೆದ ಒಂದು ವರ್ಷದಲ್ಲಿ ಹೋರ್ಡಿಂಗ್ಸ್, ಬಸ್ ಮೇಲಿನ ಜಾಹೀರಾತು ಮತ್ತು ಬಸ್ ಶೆಲ್ಟರ್​ನಲ್ಲಿ ಜಾಹಿರಾತು ಪ್ರಕಟಿಸಲು 21 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದರ ಲಾಭವೇನಾಗಿದೆ? ಯಾವ ಪ್ರಮಾಣದಲ್ಲಿ ಅನುಕೂಲ ಎಂಬ ಕುತೂಹಲ ಜನಪ್ರತಿನಿಧಿಗಳಿಗೂ ಸಹ ಇದ್ದೇ ಇದೆ. ಸರ್ಕಾರ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಪ್ರಚಾರ ಮಾಡುವುದು ಒಂದು ಕಡೆಯಾದರೆ, ತನ್ನದೇ ಸಾರಿಗೆ ನಿಗಮಗಳ ಮೂಲಕ ಜನರಿಗೆ ವಿಷಯ ಮುಟ್ಟಿಸಲು ಪ್ರಯತ್ನಿಸುತ್ತಿದೆ.

ಅಂದಹಾಗೆ, 2014ರಲ್ಲಿ ಸರ್ಕಾರ ಜಾರಿಗೆ ತಂದಿರುವ ಜಾಹೀರಾತು ನೀತಿಯ ಅನುಷ್ಠಾನ ನಿಯಮಗಳಲ್ಲಿ ಪ್ರಸ್ತಾಪಿಸಿರುವಂತೆ, ಜಾಹೀರಾತು ಪ್ರಚಾರ ಅಭಿಯಾನದ ಬಗ್ಗೆ ಪೋಸ್ಟ್ ಎವಲ್ಯೂಷನ್ (ಮೌಲ್ಯಮಾಪನ) ಮಾಡಲು ಅವಕಾಶ ಕಲ್ಪಿಸಿಕೊಂಡಿಲ್ಲ. ಪ್ರಸ್ತುತ ಜಾಹೀರಾತು ಅನುಷ್ಠಾನ ನಿಯಮಗಳಿಗೆ ತಿದ್ದುಪಡಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿ ಜಾಹೀರಾತು ಪ್ರಚಾರದ ಅಭಿಯಾನದ ಬಗ್ಗೆ ಪೋಸ್ಟ್ ಎವಲ್ಯೂಷನ್ ಮಾಡಲು ಅವಕಾಶ ಕಲ್ಪಿಸಲು ಚಿಂತನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನಸಾಮಾನ್ಯರು ಬಸ್ ನಿಲ್ದಾಣಕ್ಕೆ ಬಂದು ಹೋಗುವುದು ಸಾಮಾನ್ಯ, ಹೀಗಾಗಿ ಸಾರಿಗೆ ವ್ಯವಸ್ಥೆಯಲ್ಲಿ ಪ್ರಚಾರಕ್ಕೆ ಒತ್ತು ನೀಡಲಾಗುತ್ತದೆ. ಸರ್ಕಾರದ ಹೊಸ ಯೋಜನೆಗಳು, ಆರೋಗ್ಯ ಅಭಿಯಾನಗಳು, ಜಾಗೃತಿ- ಸೂಚನೆಗಳನ್ನು ಪ್ರಕಟಿಸಲಾಗುತ್ತದೆ. ಬಸ್​ಗಳ ಹೊರಭಾಗದಲ್ಲಿ, ಬಸ್ ನಿಲ್ದಾಣ ಅಥವಾ ಶೆಲ್ಟರ್​ನಲ್ಲಿ, ಹೋರ್ಡಿಂಗ್ಸ್ ಬಳಸಿಕೊಳ್ಳಲಾಗುತ್ತದೆ. ಇದನ್ನು ಜನ ಯಾವ ರೀತಿ ಪರಿಗಣಿಸುತ್ತಾರೆ, ಸರ್ಕಾರದ ಉದ್ದೇಶ ಎಷ್ಟು ಸಾಫಲ್ಯ ಕಂಡಿದೆ ಎಂಬುದು ಮೌಲ್ಯ ಮಾಪನದಿಂದ ಗೊತ್ತಾಗಲಿದೆ ಎಂದು ವಿವರಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net